
ಬೆಂಗಳೂರು: ಹುಲಿ ಉಗುರು ಪೆಂಡೆಂಟ್ ನ್ನು ಕುತ್ತಿಗೆಯ ಚೈನಿಗೆ ಧರಿಸಿದ್ದ ಆರೋಪದ ಮೇಲೆ ಜೈಲು ಸೇರಿದ್ದ ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ವರ್ತೂರು ಸಂತೋಷ್ (Varthur Santhosh) ಅವರು ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ.
ಕಳೆದ ವಾರ ಅವರನ್ನು ಅರಣ್ಯಾಧಿಕಾರಿಗಳು ನೇರವಾಗಿ ಬಿಗ್ ಬಾಸ್ ಮನೆಯಿಂದ ಬಂಧಿಸಿ ಕರೆದಕೊಂಡು ಹೋಗಿ ಪರಪ್ಪನ ಅಗ್ರಹಾರದಲ್ಲಿರಿಸಿದ್ದರು. ನಂತರ ಅವರಿಗೆ ಜಾಮೀನು ಸಿಕ್ಕಿತ್ತು. ಜಾಮೀನು ಪಡೆದು ಹೊರಬಂದ ಬೆನ್ನಲ್ಲೇ ವರ್ತೂರು ಸಂತೋಷ್ ಅವರಿಗೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಲು ಮತ್ತೊಮ್ಮೆ ಅವಕಾಶ ಸಿಕ್ಕಿದೆ.
ತಾನು ಇಷ್ಟು ದಿನ ಎಲ್ಲಿ ಹೋಗಿದ್ದೆ, ಏಕೆ ಹೊರ ಹೋಗಿದ್ದೆ ಎಂಬುದನ್ನು ಅವರು ಸಹಸ್ಪರ್ಧಿಗಳ ಜೊತೆ ಹಂಚಿಕೊಳ್ಳುತ್ತಾರೋ ಎಂಬ ಕುತೂಹಲವಿದೆ.
ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಮನೆ ಒಳಗೆ ಬರುತ್ತಿದ್ದಂತೆ ಉಳಿದ ಸ್ಪರ್ಧಿಗಳಿಗೆ ಅಚ್ಚರಿ ಆಗಿದೆ. ಅವರು ಒಂದು ವಾರ ಗ್ಯಾಪ್ ಕೊಟ್ಟಿದ್ದು ಏಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಹೀಗಾಗಿ, ಅವರಿಗೆ ಪ್ರಶ್ನೆಗಳ ಸುರಿಮಳೆಗೈಯಲಾಗಿದೆ. ‘ಬಿಸ್ನೆಸ್ ವಿಚಾರಕ್ಕೆ ಹೊರಗೆ ಹೋಗಿದ್ದೆಯೋ ಅಥವಾ ಆರೋಗ್ಯದ ಸಮಸ್ಯೆ ಕಾಡಿತ್ತೋ’ ಎಂದು ವಿನಯ್ ಕೇಳಿದರು. ‘ನಿಮ್ಮ ಚಿನ್ನವನ್ನು ತೆಗೆದುಕೊಂಡು ಹೋದರೆ’ ಎಂದು ನಮ್ರತಾ ಪ್ರಶ್ನಿಸಿದ್ದಾರೆ. ಈ ವೇಳೆ ಬಿಗ್ ಬಾಸ್ ನಾಮಿನೇಷನ್ ವಿಚಾರ ಪ್ರಸ್ತಾಪವಾಗಿದೆ. ಇವೆಲ್ಲವೂ ಇಂದು ರಾತ್ರಿಯ ಬಿಗ್ ಬಾಸ್ ಸಂಚಿಕೆಯಲ್ಲಿ ಪ್ರಸಾರವಾಗಲಿದೆ.
Advertisement