CBFCಯ ಮುಂಬೈ ಕಚೇರಿಯಲ್ಲಿ ಭ್ರಷ್ಟಾಚಾರ: ತಮಿಳು ನಟ ವಿಶಾಲ್ ಆರೋಪ, ತನಿಖೆಗೆ ಆದೇಶ
ಸಿಬಿಎಫ್‌ಸಿಯ ಮುಂಬೈ ಕಚೇರಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ ತಮಿಳು ನಟ ವಿಶಾಲ್ ಅವರು, ತಮ್ಮ ಹಿಂದಿ ಚಿತ್ರ "ಮಾರ್ಕ್ ಆಂಟನಿ" ಬಿಡುಗಡೆಗಾಗಿ ಪ್ರಮಾಣಪತ್ರ ಪಡೆಯಲು ಲಂಚ ಕೇಳುತ್ತಿರುವುದಾಗಿ ಹೇಳಿದ್ದಾರೆ.
Published: 29th September 2023 07:14 PM | Last Updated: 29th September 2023 09:03 PM | A+A A-

ನಟ ವಿಶಾಲ್
ನವದೆಹಲಿ: ಸಿಬಿಎಫ್‌ಸಿಯ ಮುಂಬೈ ಕಚೇರಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ ತಮಿಳು ನಟ ವಿಶಾಲ್ ಅವರು, ತಮ್ಮ ಹಿಂದಿ ಚಿತ್ರ "ಮಾರ್ಕ್ ಆಂಟನಿ" ಬಿಡುಗಡೆಗಾಗಿ ಪ್ರಮಾಣಪತ್ರ ಪಡೆಯಲು ಲಂಚ ಕೇಳುತ್ತಿರುವುದಾಗಿ ಹೇಳಿದ್ದಾರೆ. ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶುಕ್ರವಾರ ತನಿಖೆಗೆ ಆದೇಶಿಸಿದೆ.
ಸಿಬಿಎಫ್‌ಸಿಯ ಮುಂಬೈ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಿಶಾಲ್ ಅವರು ಗುರುವಾರ ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಮಾಡಿದ್ದರು. "ಮಾರ್ಕ್ ಆಂಟನಿ" ಸ್ಕ್ರೀನಿಂಗ್ ಮತ್ತು ಪ್ರಮಾಣೀಕರಣಕ್ಕಾಗಿ ತಾವು 6.5 ಲಕ್ಷ ರೂಪಾಯಿ ಪಾವತಿಸಬೇಕಾಗಿದೆ ಎಂದು ತಿಳಿಸಿದ್ದರು.
ಇದನ್ನು ಓದಿ: ತಮಿಳು ನಟ ಸಿದ್ದಾರ್ಥ್ ಪತ್ರಿಕಾಗೋಷ್ಠಿ ತಡೆದು ರಕ್ಷಣಾ ವೇದಿಕೆ ಆಕ್ರೋಶ: ಕನ್ನಡಿಗರ ಪರವಾಗಿ ಕ್ಷಮೆ ಕೋರಿದ ಪ್ರಕಾಶ್ ರಾಜ್
"ನಟ ವಿಶಾಲ್ ಅವರು ಬಹಿರಂಗಪಡಿಸಿರುವ CBFC ಭ್ರಷ್ಟಾಚಾರದ ವಿಚಾರ ಅತ್ಯಂತ ದುರದೃಷ್ಟಕರವಾಗಿದೆ. ಸರ್ಕಾರ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಮತ್ತು ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬಂಧ ತನಿಖೆಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಮುಂಬೈನಲ್ಲಿ ಇಂದೇ ವಿಚಾರಣೆ ನಡೆಸಲಿದೆ" ಎಂದು ಐ & ಬಿ ಸಚಿವಾಲಯ ಶುಕ್ರವಾರ ಟ್ವೀಟ್ ಮಾಡಿದೆ.
ಸಿಬಿಎಫ್‌ಸಿಯಿಂದ ಕಿರುಕುಳಕ್ಕೆ ಒಳಗಾದ ಯಾವುದೇ ನಿದರ್ಶನಗಳಿದ್ದರೆ ಅದನ್ನು ತನ್ನ ಗಮನಕ್ಕೆ ತರುವಂತೆ ಮತ್ತು ಮಾಹಿತಿ ಹಂಚಿಕೊಳ್ಳುವಂತೆ ಸಚಿವಾಲಯ ಜನರಿಗೆ ಮನವಿ ಮಾಡಿದೆ.