ವಿಜಯ್ ಕುಮಾರ್- ಜಡೇಶಾ ಹಂಪಿ ಕಾಂಬಿನೇಷನ್ 'ವಿಕೆ-29' ಪೋಸ್ಟರ್ ಬಿಡುಗಡೆ
ದುನಿಯಾ ವಿಜಯ್ ಮತ್ತು ಜಡೇಶ್ ಕುಮಾರ್ ಹಂಪಿ ಕಾಂಬಿನೇಷನ್‌ನ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ. ಸಮಾರಂಭದಲ್ಲಿ ಕಾಟೇರ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಮತ್ತು ಚಿತ್ರ ನಿರ್ಮಾಪಕ ಗುರು ದೇಶಪಾಂಡೆ ಉಪಸ್ಥಿತರಿದ್ದರು.
ಈ ಚಿತ್ರದಲ್ಲಿ ರಚಿತಾರಾಮ್ ನಾಯಕಿಯಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಪುತ್ರಿ ರಿತನ್ಯ (ಮೋನಿಕಾ) ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಈ ಮೂಲಕ ಹೊಸ ಹೆಸರಿನ ಜತೆಗೆ ಅವರ ಆಗಮನವಾಗಲಿದೆ. "ಡೇರ್ ಡೆವಿಲ್ ಮುಸ್ತಫಾ" ಖ್ಯಾತಿಯ ಶಿಶಿರ್ ಸಹ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದು ನಾನು ಕಂಡ, ಕೇಳಿದ ಹಾಗೂ ನೋಡಿದ ನೈಜ ಕಥೆ ಎಂದು ಮಾತನಾಡಿದ ನಿರ್ದೇಶಕ ಜಡೇಶ ಕೆ ಹಂಪಿ, ಇದು ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆ. ಕೋಲಾರ ಭಾಗದಲ್ಲಿ ನಡೆಯುವ ಕಥೆಯಾಗುವುದರಿಂದ ಸಂಭಾಷಣೆ ಕೋಲಾರದ ಭಾಷೆಯಲ್ಲೇ ಇರುತ್ತದೆ. ಕೋಲಾರ ಮೂಲದವರೇ ಆದ ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದಾರೆ. 90ರ ಕಾಲಘಟ್ಟದಲ್ಲಿ ನಡೆಯುವ ಸಿನಿಮಾ ಇದು. ಶಿವರಾಮ ಕಾರಂತರ ಚೋಮನ ದುಡಿ ಚಿತ್ರದಲ್ಲಿನ ಚೋಮನ ಪಾತ್ರ ನಮ್ಮ ಈ ಸಿನಿಮಾಕ್ಕೆ ಪ್ರೇರಣೆ. ಹಾಗೆಂದ ಮಾತ್ರಕ್ಕೆ ಅದಕ್ಕೂ ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಕೋಲಾರ, ಗುಡಿಬಂಡೆ ಮತ್ತಿತರ ಕಡೆ ಚಿತ್ರೀಕರಣ ನಡೆಯಲಿದೆ ಎಂದು ವಿವರ ನೀಡಿದ್ದಾರೆ.
ಈ ಸಿನಿಮಾ ಮೂಲಕ ದುನಿಯಾ ವಿಜಯ್ ಅವರ ಪುತ್ರಿ ಮೋನಿಕಾ ತಮ್ಮ ಹೆಸರನ್ನು ರಿತನ್ಯ ಎಂದು ಬದಲಿಸಿಕೊಂಡು ಆಗಮಿಸುತ್ತಿದ್ದಾರೆ. ಚಿತ್ರದಲ್ಲಿ ತಂದೆ ವಿಜಯ್ ಮಗಳಾಗಿಯೇ ನಟಿಸಲಿದ್ದಾರೆ. ಮಗಳು ರಿತನ್ಯ, ಮುಂಬೈನ ಅನುಪಮ್ ಖೇರ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನಾ ತರಬೇತಿ ಕಲಿತು ಬಂದಿದ್ದಾಳೆ. ಮೊದಲ ಚಿತ್ರದಲ್ಲಿ ನನ್ನ ಮಗಳಾಗಿಯೇ ಆಕೆ ಅಭಿನಯಿಸಲಿದ್ದಾಳೆ. ನನ್ನ ಮಗಳು ರಿತನ್ಯ ಚಿತ್ರರಂಗಕ್ಕೆ ಆಗಮಿಸುತ್ತಿದ್ದಾಳೆ. ಮಗಳಿಗೆ ಸ್ಕ್ರಿಪ್ಟ್ ನಲ್ಲೂ ಒಳ್ಳೆಯ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ನಿರ್ದೇಶಕ ಜಡೇಶ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಜಡೇಶ್ ಕನ್ನಡ ಚಿತ್ರರಂಗದ ಅತ್ಯುತ್ತಮ ನಿರ್ದೇಶಕರಾಗುವುದು ಖಂಡಿತ ಎಂದು ವಿಜಯ್ ಕುಮಾರ್ ಹೇಳಿದ್ದಾರೆ.
ಡೇರ್‌ಡೆವಿಲ್ ಮುಸ್ತಫಾ ನಂತರ VK 29 ರಲ್ಲಿ ವಿಜಯ್ ಮತ್ತು ರಿತನ್ಯ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸ್ವಾಮಿ ಅವರ ಛಾಯಾಗ್ರಾಹಣವಿದೆ. ಸಿನಿಮಾಗೆ ಇನ್ನೂ ಸಂಗೀತ ನಿರ್ದೇಶರನ್ನು ಆಯ್ಕೆ ಮಾಡಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ