ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂಬರುವ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಶೂಟಿಂಗ್(Toxic movie) ಇಂದು ಆಗಸ್ಟ್ 8ರಂದು ಆರಂಭವಾಗುತ್ತಿದೆ. ಒಳ್ಳೆಯ ಮುಹೂರ್ತವನ್ನು ನೋಡಿಕೊಂಡು ಚಿತ್ರತಂಡ ಕೆಲಸ ಆರಂಭಿಸುತ್ತಿದ್ದು ಇದನ್ನು ಯಶ್ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿಕೊಂಡಿದ್ದಾರೆ.
ಈ ಚಿತ್ರದ ಶೂಟಿಂಗ್ ಆರಂಭಕ್ಕೆ ಮುನ್ನ ಯಶ್ ತಮ್ಮ ಕುಟುಂಬ ಹಾಗೂ ಚಿತ್ರದ ನಿರ್ಮಾಪಕ ವೆಂಕಟ ನಾರಾಯಣ ಅವರ ಜೊತೆ ಧರ್ಮಸ್ಥಳ, ಉಜಿರೆ ಬಳಿಯ ಸುರ್ಯ ದೇವಸ್ಥಾನ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿ ಬಂದಿದ್ದರು.
ಟಾಕ್ಸಿಕ್ ಚಿತ್ರದ ಶೂಟಿಂಗ್ ಮತ್ತು ಇತರ ಕೆಲಸ ಕಾರ್ಯಗಳು ಇಷ್ಟು ದಿನ ವಿಳಂಬವಾಗಿತ್ತು. ಕಾನೂನು ತೊಡಕು ಸಹ ಎದುರಾಗಿತ್ತು. ಇದೀಗ ನಿರ್ವಿಘ್ನವಾಗಿ ಅದನ್ನೆಲ್ಲಾ ದಾಟಿಬಂದು ಶೂಟಿಂಗ್ ಇಂದು ಆರಂಭವಾಗಿದೆ.
ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಟಾಕ್ಸಿಕ್ ಚಿತ್ರದಲ್ಲಿ ಯಶ್ ನಾಯಕ ನಟನಾದರೆ, ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಮತ್ತು ಮಲಯಾಳಂ ನಟ ಶೈನ್ ಟಾಮ್ ಚಾಕೊ ಸೇರಿದಂತೆ ಹಲವು ಖ್ಯಾತ ತಾರೆಯರ ಬಳಗವಿದೆ. ನವಾಜುದ್ದೀನ್ ಸಿದ್ದಿಕಿ ಕೂಡ ತಾರಾಗಣಕ್ಕೆ ಸೇರಬಹುದು ಎಂಬ ಸುದ್ದಿಯಿದೆ.
ಕೆವಿಎನ್ ಪ್ರೊಡಕ್ಷನ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸುತ್ತಿರುವ ಟಾಕ್ಸಿಕ್ ಚಿತ್ರ ಏಪ್ರಿಲ್ 10, 2025 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಪ್ರಭಾಸ್ ಅವರ ದಿ ರಾಜಾ ಸಾಬ್ ಸಹ ಅದೇ ದಿನಾಂಕದಂದು ಬಿಡುಗಡೆಯಾಗಲಿದೆ, ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗುವ ಸಾಧ್ಯತೆ ಇರುವುದರಿಂದ ಟಾಕ್ಸಿಕ್ ಬಿಡುಗಡೆಯ ದಿನಾಂಕವನ್ನು ಮುಂದೂಡುವ ಸಾಧ್ಯತೆಯಿದೆ.
ಚಿತ್ರದಲ್ಲಿ ಛಾಯಾಗ್ರಹಣವನ್ನು ರಾಜೀವ್ ರವಿ ನಿರ್ವಹಿಸಲಿದ್ದಾರೆ. ಇಷ್ಟು ದಿನ ಚಿತ್ರದ ಮಾಹಿತಿ ಬಗ್ಗೆ ಕಾಯುತ್ತಿದ್ದ ಯಶ್ ಅಭಿಮಾನಿಗಳಿಗೆ ಈ ದಿನ ಸಂತೋಷ ಇಮ್ಮಡಿಯಾಗಲಿದೆ ಎಂಬುದಂತೂ ಖಂಡಿತ.
Advertisement