ಕೊಚ್ಚಿ: ಮಲಯಾಳಂನ ಹಿರಿಯ ನಟ ಸಿದ್ದಿಕ್ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭಾನುವಾರ ರಾಜೀನಾಮೆ ನೀಡಿದ್ದಾರೆ.
ಸಂಘದ ಅಧ್ಯಕ್ಷ ಮೋಹನ್‌ಲಾಲ್ ಅವರಿಗೆ ಪತ್ರ ಬರೆದು ಭಾನುವಾರ ಬೆಳಗ್ಗೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಸಂಘದ ಮೂಲಗಳು ತಿಳಿಸಿವೆ. ನನ್ನ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳ ಹಿನ್ನೆಲೆಯಲ್ಲಿ ನಾನು ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ ಎಂದು ಸಿದ್ದಿಕ್ ಹೇಳಿದ್ದಾರೆ ಎಂದು ಒನ್ಮನೋರಮಾ ವರದಿ ಮಾಡಿದೆ.
2019 ರಲ್ಲಿ ಸಿದ್ದಿಕ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ನಟಿ ರೇವತಿ ಸಂಪತ್ ಅವರು, ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಪುನರುಚ್ಚರಿಸಿದ ಒಂದು ದಿನದ ನಂತರ ರಾಜೀನಾಮೆ ನೀಡಿದ್ದಾರೆ. ನನಗೆ 21 ವರ್ಷ ವಯಸ್ಸಿದ್ದಾಗ ಸಿದ್ದಿಕ್ 2016 ರಲ್ಲಿ ಚಲನಚಿತ್ರ ಪ್ರಾಜೆಕ್ಟ್ ಕುರಿತು ಚರ್ಚಿಸುವ ನೆಪದಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಖಾತೆಯನ್ನು ಬಳಸಿಕೊಂಡು ಅವರನ್ನು ಸಂಪರ್ಕಿಸಿದ್ದರು ಎಂದು ರೇವತಿ ಆರೋಪಿಸಿದ್ದಾರೆ.
ಅವನು ಒಬ್ಬ ಕ್ರಿಮಿನಲ್, ಅವನು ನನ್ನನ್ನು ಒಂದು ಗಂಟೆ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದನು. ಅವನು ಆಫರ್ ಬಗ್ಗೆ ಚರ್ಚಿಸಲು ಹೋಟೆಲ್ ಮ್ಯಾಸ್ಕಾಟ್‌ಗೆ ಬರುವಂತೆ ಹೇಳಿದನು. ಹೊಂದಾಣಿಕೆ ಮಾಡಿಕೊಳ್ಳಲು ನಾನು ರೆಡಿನಾ ಎಂದು ಅವನು ನನ್ನನ್ನು ಕೇಳಿದಾಗ ತಕ್ಷಣ ನನಗೆ ಆಘಾತವಾಯಿತು ಎಂದು ರೇವತಿ ಹೇಳಿದರು.
ಎಡವೇಲ ಬಾಬು ರಾಜೀನಾಮೆ ನೀಡಿದ ಬಳಿಕ ಎರಡು ತಿಂಗಳ ಹಿಂದೆಯಷ್ಟೇ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದಿಕ್ ಆಯ್ಕೆಯಾಗಿದ್ದರು. ಎಡವೇಲ ಬಾಬು ಅವರ ಮೇಲೂ ಜೂನಿಯರ್ ಆರ್ಟಿಸ್ಟ್ ನಿಂದ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ.
ಮಲಯಾಳಂ ಚಲಚಿತ್ರೋದ್ಯಮದಲ್ಲಿ ಲೈಂಗಿಕ ದೌರ್ಜನ್ಯದ ಹಲವು ಘಟನೆಗಳು ನಡೆದಿವೆ ಎಂದು ಜಸ್ಟಿಸ್ ಹೇಮಾ ಸಮಿತಿಯ ವರದಿ ಬಿಡುಗಡೆಯ ಬೆನ್ನಲ್ಲೇ ಈ ಎಲ್ಲ ಬೆಳವಣಿಗೆಗಳು ನಡೆದಿವೆ.
Advertisement