
ಹೈದರಾಬಾದ್: ಪುಷ್ಪ–2 ಪ್ರದರ್ಶನದ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆ ರೇವತಿ ಕುಟುಂಬಕ್ಕೆ ಚಿತ್ರದ ನಾಯಕ ನಟ ಅಲ್ಲು ಅರ್ಜುನ್, ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕರು ಒಟ್ಟು ₹2 ಕೋಟಿ ಪರಿಹಾರ ನೀಡಿದ್ದಾರೆ.
ಈ ಮಧ್ಯೆ, ತೆಲಂಗಾಣ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎಫ್‌ಡಿಸಿ) ಅಧ್ಯಕ್ಷ ಮತ್ತು ಪ್ರಮುಖ ನಿರ್ಮಾಪಕ ದಿಲ್ ರಾಜು ಅವರು, ಸರ್ಕಾರ ಮತ್ತು ಚಲನಚಿತ್ರೋದ್ಯಮದ ನಡುವೆ ಆರೋಗ್ಯಕರ ಸಂಬಂಧವನ್ನು ಬೆಳೆಸಲು ಚಿತ್ರರಂಗದ ನಿಯೋಗದ ಜೊತೆ ಗುರುವಾರ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಲಿದ್ದೇವೆ ಎಂದು ಹೇಳಿದರು. ಅಲ್ಲು ಅರ್ಜುನ್ ಅವರ ತಂದೆ ಮತ್ತು ಹಿರಿಯ ನಿರ್ಮಾಪಕ ಅಲ್ಲು ಅರವಿಂದ್, ದಿಲ್ ರಾಜು ಮತ್ತು ಇತರರೊಂದಿಗೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ಕಾಲ್ತುಳಿತದಲ್ಲಿ ಗಾಯಗೊಂಡಿರುವ ಬಾಲಕನ ಆರೋಗ್ಯ ವಿಚಾರಿಸಿದರು.
ವೈದ್ಯರೊಂದಿಗೆ ಮಾತನಾಡಿದ ನಂತರ ಪ್ರತಿಕ್ರಿಯಿಸಿದ ಅಲ್ಲು ಅರವಿಂದ್, ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಮತ್ತು ಈಗ ಕೃತಕ ಉಸಿರಾಟ ವ್ಯವಸ್ಥೆ ಇಲ್ಲದೆ ಉಸಿರಾಡುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದು, ಸಮಾಧಾನ ತಂದಿದೆ ಎಂದು ತಿಳಿಸಿದರು. ಬಾಲಕನ ಸಂಪೂರ್ಣ ಚೇತರಿಕೆಯ ಬಗ್ಗೆ ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.
ಇದೇ ವೇಳೆ, ಮೃತ ಮಹಿಳೆಯ ಕುಟುಂಬಕ್ಕೆ ಅಲ್ಲು ಅರ್ಜುನ್ (₹1ಕೋಟಿ), ಪುಷ್ಪ ಚಿತ್ರದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್(₹50 ಲಕ್ಷ), ಮತ್ತು ಚಿತ್ರದ ನಿರ್ದೇಶಕ ಸುಕುಮಾರ್ (₹50 ಲಕ್ಷ) ಆರ್ಥಿಕ ನೆರವು ನೀಡಿದ್ದಾರೆ ಎಂದು ಘೋಷಿಸಿದರು. ದಿಲ್ ರಾಜು ಅವರಿಗೆ ಚೆಕ್ ಹಸ್ತಾಂತರಿಸಿದ ಅರವಿಂದ್, ಬಾಲಕನ ಕುಟುಂಬಕ್ಕೆ ತಲುಪಿಸುವಂತೆ ಮನವಿ ಮಾಡಿದರು. ಕುಟುಂಬವನ್ನು ನೇರವಾಗಿ ಭೇಟಿ ಮಾಡುವುದಕ್ಕೆ ಕಾನೂನಿನ ತೊಡಕಿದೆ ಎಂದರು. ಸಂಧ್ಯಾ ಥಿಯೇಟರ್ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
Advertisement