
ಮುಂಬೈ: ಮರಾಠಿ ನಟಿ ಊರ್ಮಿಳಾ ಕೊಠಾರೆ ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರ್ಮಿಕರೊಬ್ಬನ ಸಾವನ್ನಪ್ಪಿರುವ ಘಟನೆ ಮುಂಬೈನ ಕಂಡಿವಲಿ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಅಪಘಾತದಲ್ಲಿ ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ನಟಿಯಲ್ಲದೆ, ಅವರ ಚಾಲಕ ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಟಿ ಊರ್ಮಿಳಾ ಕೊಠಾರೆ ಶೂಟಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸಮತಾ ನಗರ ಪೊಲೀಸ್ ಠಾಣೆಯ ಅಧಿಕಾರಿ ಪ್ರಕಾರ, ಮಧ್ಯರಾತ್ರಿಯ ನಂತರ ಕಾಂದಿವಲಿ ಪೂರ್ವ ಪ್ರದೇಶದ ಪೊಯಿಸರ್ ಮೆಟ್ರೋ ನಿಲ್ದಾಣದ ಅಡಿಯಲ್ಲಿ ಮೆಟ್ರೋ ರೈಲಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ನಟಿ ಕೊಠಾರೆ ಅವರ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಘಟನೆಯಲ್ಲಿ ನಟಿ ಹಾಗೂ ಆಕೆಯ ಚಾಲಕ ಕೂಡ ಗಾಯಗೊಂಡಿದ್ದಾರೆ. ಆದರೆ, ಸರಿಯಾದ ಸಮಯಕ್ಕೆ ಏರ್‌ಬ್ಯಾಗ್ ಓಪನ್ ಆಗಿದ್ದರಿಂದ ನಟಿ ಹಾಗೂ ಚಾಲಕನ ಜೀವ ಉಳಿದಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಬದಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ. ಈ ಸಂಬಂಧ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಟಿ ಊರ್ಮಿಳಾ ಕೊಠಾರೆ ಮರಾಠಿಯಲ್ಲಿ "ದುನಿಯಾದಾರಿ" ಮತ್ತು ಹಿಂದಿಯಲ್ಲಿ "ಥ್ಯಾಂಕ್ ಗಾಡ್" ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.
Advertisement