'ಮಂಡ್ಯ ಹೈದ' ಅಭಯ್ ಗೆ ಮಾಸ್ ಹೀರೋ ಆಗುವ ಎಲ್ಲಾ ಲಕ್ಷಣಗಳಿವೆ: ಬಿಗ್ ಬಾಸ್ ವಿಜೇತ ಕಾರ್ತಿಕ್!
ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿಜೇತ ಕಾರ್ತಿಕ್ ಮಹೇಶ್ ಶಾಸಕ ರವಿಕುಮಾರ್ ಗೌಡ ಅವರೊಂದಿಗೆ ಮಂಡ್ಯ ಹೈದ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದರು. ಚಿತ್ರದಲ್ಲಿ ಅಭಯ್ ಚಂದ್ರಶೇಖರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಫೆಬ್ರವರಿ 16 ರಂದು ಸಿನಿಮಾ ಬಿಡುಗಡೆಯಾಗಲಿದೆ.
ಕಾರ್ತೀಕ್ ಮಹೇಶ್ ಮಾತನಾಡಿ, ‘ಬಿಗ್ ಬಾಸ್’ ಮನೆಯಿಂದ ಹೊರಬಂದ ಮೇಲೆ ಭಾಗವಹಿಸುತ್ತಿರುವ ಮೊದಲ ಕಾರ್ಯಕ್ರಮ ಇದು. ನಾನು ಕೂಡ ಹಿಂದೆ ‘ಡೊಳ್ಳು’ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದೆ. ನನ್ನ ಜೊತೆ ಅಭಯ್ ಕೂಡ ಅಭಿನಯಿಸಿದ್ದರು. ಈ ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದೆ. ಅಭಯ್ ನನ್ನ ಸ್ನೇಹಿತ. ಆತನಲ್ಲಿ ಮಾಸ್ ಹೀರೋ ಆಗುವ ಎಲ್ಲಾ ಲಕ್ಷಣಗಳಿವೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದರು.
ನಾಯಕ ಅಭಯ್ ಮಾತನಾಡಿ, ‘ನಾನು ಈ ಚಿತ್ರದಲ್ಲಿ ಶಿವ ಎಂಬ ಪಾತ್ರ ಮಾಡಿದ್ದೇನೆ, ಸ್ನೇಹ, ಸ್ನೇಹಿತರಿಗೆ ಎಷ್ಟು ಬೆಲೆ ಕೊಡುತ್ತಾನೆ, ಸ್ನೇಹಿತರ ನಡುವೆ ಹೇಗೆ ಗೊಂದಲ ಉಂಟಾಗುತ್ತದೆ ಎನ್ನುವುದೇ ‘ಮಂಡ್ಯ ಹೈದ’ನ ಕಥೆ’ ಎಂದರು. ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಯುವಕನೊಬ್ಬ ಏನೇನೆಲ್ಲಾ ಸಾಹಸ ಮಾಡುತ್ತಾನೆ ಎಂದು ಸಾರುವ ‘ಮಂಡ್ಯ ಹೈದ’ ಚಿತ್ರದಲ್ಲಿ ಅಭಯ್ ಚಂದ್ರಶೇಖರ್ ಹೀರೋ ಆಗಿ ನಟಿಸಿದರೆ, ಭೂಮಿಕಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ ‘ಮನಸಾಗಿದೆ’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ಚಂದ್ರಶೇಖರ್, ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿ. ಶ್ರೀಕಾಂತ್ ಕಥೆ-ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.
ತೇಜಸ್ ಕ್ರಿಯೇಶನ್ಸ್ ಬ್ಯಾನರ್‍ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಸುರೇಂದ್ರನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಮನುಗೌಡ ಕೆಲಸ ಮಾಡಿದ್ದಾರೆ, ಬಾಲರಾಜ್ ವಾಡಿ, ನಿರ್ಮಾಪಕ ಚಂದ್ರಶೇಖರ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೆರಡು ಚಿತ್ರಗಳಲ್ಲಿ ಕೆಲಸ ಮಾಡಿರುವ ಮಂಡ್ಯ ಮೂಲದ ಅಭಯ್ ಚಂದ್ರಶೇಖರ್ ಈ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ