
ರಂಗ್ ಬಿರಂಗಿ, ಡೇವಿಡ್, ಮತ್ತು ದಿ ವೆಕೆಂಟ್ ಹೌಸ್ ಚಿತ್ರಗಳ ಮೂಲಕ ನಟನಾ ವೃತ್ತಿಜೀವನ ಪ್ರಾರಂಭಿಸಿದ ನಟ ಶ್ರೇಯಸ್ ಚಿಂಗಾ ಅವರು 'ಒನ್ ಅಂಡ್ ಹಾಫ್' ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರಿಗೆ ನಾಯಕಿಯಾಗಿ ಮಾನ್ವಿತಾ ಹರೀಶ್ ಕಾಮತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
'ಒನ್ ಅಂಡ್ ಹಾಫ್' ಚಿತ್ರವು ಚಿತ್ರೀಕರಣ ಪೂರ್ಣಗೊಳಿಸಿದೆ ಮತ್ತು ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್‌ನಲ್ಲಿದೆ. ಇತ್ತೀಚೆಗೆ, ನಿರ್ಮಾಪಕ ಆರ್ ಚರಣ್ ಅವರ ಹುಟ್ಟುಹಬ್ಬದಂದು ಚಿತ್ರತಂಡವು ಒಂದು ಹಾಡನ್ನು ಬಿಡುಗಡೆ ಮಾಡಿದ್ದು, ಈ ವೇಳೆ ಮಾತನಾಡಿದ ಮಾನ್ವಿತಾ, "ಈ ಚಿತ್ರ ನನಗೆ ವಿಶೇಷವಾಗಿದೆ; ಇದು ನನ್ನ ಜೀವನದಲ್ಲಿ ಹೊಸ ವ್ಯಕ್ತಿಯನ್ನು ಪರಿಚಯಿಸಿದೆ. ಚಿತ್ರವೂ ಸುಂದರವಾಗಿ ಮೂಡಿಬಂದಿದೆ. ಮಣಿಕಾಂತ್ ಕದ್ರಿ ಅವರ ಸಂಗೀತ ಅದ್ಭುತವಾಗಿದೆ. ಲಿಖಿತಾ ಸಿರಿ ನನ್ನ ಕೋಸ್ಟಾರ್. ನಮ್ಮ 3 ಜನಕ್ಕೂ ಒಳ್ಳೆ ಬಾಂಡಿಂಗ್ ಇತ್ತು. ಶ್ರೇಯಸ್ ಡೈರೆಕ್ಟರ್ ಆಕ್ಟರ್ ಆಗಿ ಒಳ್ಳೆ ಕೆಲಸ ಮಾಡಿದ್ದಾರೆ ಎಂದರು.
ಇನ್ನು ನಿರ್ದೇಶಕ ಶ್ರೇಯಸ್ ಚಿಂಗಾ ಅವರು ಮಾತನಾಡಿ, ಇದು ತಂತ್ರಜ್ಞರ ಚಿತ್ರ ಎಂದು ಬಣ್ಣಿಸಿದರು. "ಈ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ತಂತ್ರಜ್ಞರು ನನ್ನ ಕುಟುಂಬ ಇದ್ದಂತೆ. ಅವರು ಅವರ ಕರ್ತವ್ಯ ನಿರ್ವಹಿಸಿದ್ದಾರೆ. ನಾನು ಸಿನಿಮಾವನ್ನು ತೆರೆಗೆ ತರಲು ಬೆಂಬಲಿಸಿದ ಇಡೀ ಚಿತ್ರತಂಡಕ್ಕೆ ಧನ್ಯವಾದ ಹೇಳುತ್ತೇನೆ. ಈ ಸಮಯದಲ್ಲಿ ಜನ ಥಿಯೇಟರ್ ಗೆ ಬರುತ್ತಿಲ್ಲ. ನಿಮ್ಮ ಬೆಂಬಲ ನಮಗೆ ಇರಬೇಕು. ಇದು ತುಂಬಾ ವಿಭಿನ್ನ ಸಿನಿಮಾ. ಬೇರೆ ಭಾಷೆಯಲ್ಲಿ ಮಾಡುವ ಸಾಧ್ಯತೆ ನೂರಷ್ಟಿದೆ ಎಂದರು.
ಸುಲಕ್ಷ್ಮಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ 'ಒನ್ ಅಂಡ್ ಹಾಫ್' ಚಿತ್ರವು ಹಾಸ್ಯಮಯ ಚಿತ್ರವಾಗಿದೆ. ತಾರಾಗಣದಲ್ಲಿ ಸಾಧು ಕೋಕಿಲ, ಅವಿನಾಶ್, ಸುಚೇಂದ್ರ ಪ್ರಸಾದ್, ಸ್ಪರ್ಶ ರೇಖಾ, ಅನಂತು, ಸುಂದರಶ್ರೀ, ಹಿತೇಶ್ ಕುಮಾರ್, ಮಹಾಂತೇಶ್ ಹಿರೇಮಠ, ನಿಕಿತಾ ದೋರ್ಥೋಡಿ, ಲಲಿತಾ ನಾಯಕ್, ರೋಹಿತ್ ಅರುಣ್ ಅಮನ್, ಮತ್ತು ರಾಖಿ ಭೂತಪ್ಪ ಇದ್ದಾರೆ. ದೇವೇಂದ್ರ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Advertisement