
ನಟ ಯುವ ರಾಜ್ ಕುಮಾರ್ ಹಾಗೂ ಪತ್ನಿ ಶ್ರೀದೇವಿ ವಿಚ್ಛೇದನ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಕೌಟುಂಬಿಕ ನ್ಯಾಯಾಲಯದಲ್ಲಿ ನಟ ಯುವ ರಾಜ್ ಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಶ್ರೀದೇವಿಗೆ ಅಕ್ರಮ ಸಂಬಂಧ ಇದೆಯೆಂಬ ಆರೋಪವನ್ನು ಸಹ ಹೊರಿಸಿದ್ದಾರೆ. ಇಂದು ವಿಚ್ಛೇದನ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 23 ಕ್ಕೆ ಮುಂದೂಡಲಾಗಿದೆ.
ಯುವ ರಾಜ್ ಕುಮಾರ್ ಸಲ್ಲಿಸಿರುವ ವಿಚ್ಛೇದನಕ್ಕೆ ಶ್ರೀದೇವಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಆಕ್ಷೇಪಣೆ ಬಗ್ಗೆ ವಾದ ಮಂಡಿಸಲು ಶ್ರೀದೇವಿ ಪರ ವಕೀಲರು ಅವಕಾಶ ಕೇಳಿದರು. ಇದಕ್ಕೆ ಅವಕಾಶ ನೀಡದ ನ್ಯಾಯಾಧೀಶರು, ಇದು ಕೌಟುಂಬಿಕ ಕಲಹವಾದ್ದರಿಂದ ಮೊದಲು ಕೌನ್ಸಲಿಂಗ್ ಆಗಬೇಕು. ಕೌನ್ಸಲಿಂಗ್ ಮುಕ್ತಾಯದ ಬಳಿಕ ಇಬ್ಬರ ತೀರ್ಮಾನ ಕೇಳಬೇಕು. ಮೀಡಿಯೇಟರ್ ಕೌನ್ಸಲಿಂಗ್ ನಡೆದ ಬಳಿಕವಷ್ಟೆ ಪ್ರಕರಣದ ಮುಂದಿನ ಹಂತಕ್ಕೆ ಅವಕಾಶ ನೀಡಲಾಗುತ್ತದೆ ಎಂದುನ್ಯಾಯಾಧೀಶೆ ಕಲ್ಪನಾ ಹೇಳಿದ್ದಾರೆ.
ಅಮೆರಿಕಕ್ಕೆ ಓದಲು ತೆರಳಿದ್ದ ಶ್ರೀದೇವಿ ವಿಚ್ಛೇದನ ಅರ್ಜಿ ಸಲ್ಲಿಕೆಯಾದ ಬಳಿಕ ಭಾರತಕ್ಕೆ ಮರಳಿದ್ದು ಕಳೆದ ಕೆಲವು ದಿನಗಳಿಂದಲೂ ಇಲ್ಲಿಯೇ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಶ್ರೀದೇವಿ, ನನಗೆ ಅಂಟಿರುವ ಕಳಂಕ ಹೋಗಲಾಡಿಸಿಕೊಳ್ಳುವವರೆಗೆ ಹೋರಾಟ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ.
Advertisement