
ಪ್ರಸಿದ್ಧ ಮಲಯಾಳಂ ನಿರ್ದೇಶಕ ಜಿಯೋ ಬೇಬಿ ಮತ್ತು ಸಿತೇಶ್ ಸಿ ಗೋವಿಂದ್ ನಿರ್ದೇಶನದ 'ಇದು ಎಂಥಾ ಲೋಕವಯ್ಯ' ಎಂಬ ಕನ್ನಡ ಸಿನಿಮಾ ಆಗಸ್ಟ್ 9 ರಂದು ಬಿಡುಗಡೆಯಾಗಲಿದೆ.
ದಿ ಗ್ರೇಟ್ ಇಂಡಿಯನ್ ಕಿಚನ್ ಮತ್ತು ಮಮ್ಮುಟ್ಟಿ ಮತ್ತು ಜ್ಯೋತಿಕಾ ನಟಿಸಿದ ಕಾತಲ್ - ದಿ ಕೋರ್ ನಂತಹ ಹಿಟ್ ಚಿತ್ರಗಳೊಂದಿಗೆ ಮಲಯಾಳಂ ಚಿತ್ರರಂಗದಲ್ಲಿ ಪ್ರಬಲವಾದ ಕಥೆಯನ್ನು ಪ್ರೇಕ್ಷಕರ ಮುಂದಿಟ್ಟು ಸೈ ಎನಿಸಿಕೊಂಡಿರುವ ಜಿಯೋ ಬೇಬಿ, ಕನ್ನಡಕ್ಕೆ ತಮ್ಮ ಪ್ರತಿಭೆಯನ್ನು ಪರಿಚಯಿಸುತ್ತಿದ್ದಾರೆ. ಈ ಮೂಲಕ ಎರಡು ಪ್ರಾದೇಶಿಕ ಚಲನಚಿತ್ರ ಉದ್ಯಮಗಳ ನಡುವಿನ ಸೌಹಾರ್ದಕ್ಕೆ ಮತ್ತಷ್ಟಿ ಪುಷ್ಟಿ ನೀಡುತ್ತಿದ್ದಾರೆ. ಇದು ಎಂಥಾ ಲೋಕವಯ್ಯ ಕರ್ನಾಟಕ-ಕೇರಳ ಗಡಿಯಲ್ಲಿರುವ ಆಕರ್ಷಕ ಹಳ್ಳಿಗಳಲ್ಲಿ ನಡೆಯುವ ಸಾಮಾಜಿಕ ವಿಡಂಬನಾತ್ಮಕ ನಾಟಕವಾಗಿದೆ. ಸಿನಿಮಾವು ಎರಡು ದಿನಗಳಲ್ಲಿ ನಡೆಯುವ ಘಟನೆಗಳೊಂದಿಗೆ ಆರಂಭವಾಗುತ್ತದೆ, ಇಲ್ಲಿನ ಪಾತ್ರಗಳ ಜೀವನದಲ್ಲಿ ಉಂಟಾಗುವ ಕೆಲವು ಆಳವಾದ ಬದಲಾವಣೆಗಳಿಗೆ ಕಾರಣವಾಗುವ ಘಟನೆಗಳು ಈ ಚಿತ್ರದಲ್ಲಿವೆ.
ಚಿತ್ರವು ಕನ್ನಡ, ಮಲಯಾಳಂ, ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆಗಳ ವಿಶಿಷ್ಟ ಮಿಶ್ರಣವನ್ನು ಹೊಂದಿದೆ, ಇದು ಗಡಿ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ. ಚಲನಚಿತ್ರದಲ್ಲಿನ ಹಾಡುಗಳು ಮಿಶ್ರ ಭಾಷಾ ಅಂಶಗಳನ್ನು ಒಳಗೊಂಡಿದ್ದು ಮತ್ತಷ್ಟು ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಸಿತೇಶ್ ಸಿ ಗೋವಿಂದ್ ಅವರು ಕರ್ನಾಟಕ-ಕೇರಳ ಗಡಿಯ ಸಾಂಸ್ಕೃತಿಕ ಸತ್ವ ಮತ್ತು ಅಲ್ಲಿನ ಜನರ ವಿಶಿಷ್ಟ ರೀತಿಯ ನಂಬಿಕೆಗಳನ್ನು ಹೊರತರುವ ಒಳನೋಟವುಳ್ಳ ಸಾಮಾಜಿಕ ವ್ಯಾಖ್ಯಾನವನ್ನು ತಿಳಿಯಾದ ಹಾಸ್ಯದೊಂದಿಗೆ ಸಮತೋಲನಗೊಳಿಸಿ ಕಥೆಯನ್ನು ರಚಿಸಿದ್ದಾರೆ.ಜಿಯೋ ಬೇಬಿ ಮತ್ತು ಸಿತೇಶ್ ಸಿ ಗೋವಿಂದ್ ನಡುವಿನ ಸಹಯೋಗವು ಚಲನಚಿತ್ರ ರಂಗದಲ್ಲಿ ಸಾಕಷ್ಟು ನಿರೀಕ್ಷೆ ಸೃಷ್ಟಿಸಿದೆ.
Advertisement