
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಕಲಾವಿದರ ಸಂಘದ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಅಧ್ಯಕ್ಷ ಎನ್‌ಎಂ ಸುರೇಶ್ ಬುಧವಾರ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ ನಂತರವೇ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ದರ್ಶನ್ ವಿರುದ್ಧ ಕೆಎಫ್‌ಸಿಸಿ ಕಠಿಣ ಕ್ರಮ ಕೈಗೊಳ್ಳಬೇಕು, ಅವರ ಸಿನಿಮಾ ಬಿಡುಗಡೆ ಮಾಡಬಾರದು, ಅವರನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿ ತಮ್ಮನ್ನು ಭೇಟಿ ಮಾಡಿದ ಕೆಲವು ಕನ್ನಡ ಪರ ಸಂಘಟನೆಗಳ ಸದಸ್ಯರಿಗೆ ಪ್ರತಿಕ್ರಿಯಿಸಿದ ಎನ್.ಎಂ. ಸುರೇಶ್, ಮೊದಲಿಗೆ ರೇಣುಕಾ ಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಅವರ ನೋವು ನಮಗೂ ಅರ್ಥವಾಗಿದೆ. ಬೇಡಿಕೆಗೆ ಪ್ರತಿಕ್ರಿಯಿಸುವುದು ನಮ್ಮ ಕರ್ತವ್ಯ. ಫಿಲಂ ಚೇಂಬರ್ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಬೇಡಿ, ಅದನ್ನು ನಾನು ಒಪ್ಪಿಕೊಳ್ಳಲ್ಲ ಎಂದರು.
ಕಾನೂನು ಪ್ರಕಾರ ಪ್ರಕರಣದ ಸಮಗ್ರ ತನಿಖೆ ನಡೆಸುತ್ತಿದ್ದು, ಸತ್ಯವನ್ನು ಹೊರಗೆ ತರಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದ್ದಾರೆ. ಕಾನೂನು ಪ್ರಕರ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ನಾವು ಕೂಡಾ ಹೇಳಿದ್ದೇವೆ. ನಮಗೂ ಕೆಲವು ದೂರುಗಳು ಬಂದಿವೆ, ಆದರೆ ಅದಕ್ಕಾಗಿ 'ಕಲಾವಿದರ ಸಂಘ' ಇದೆ. ಅದರೊಂದಿಗೆ ಮಾತನಾಡಲು ಪ್ರಯತ್ನಿಸಿದ್ದೇವೆ. ಅವರ ಜೊತೆಗೆ ಮಾತನಾಡದೆ ಏಕಪಕ್ಷೀಯವಾಗಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗದು. ಚರ್ಚೆ ನಡೆಸಲು ಸಭೆ ಕರೆಯಲಾಗುವುದು, ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಚಿತ್ರ ನಿರ್ಮಾಪಕ ಹಾಗೂ ಕೆಎಫ್‌ಸಿಸಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ಮಾತನಾಡಿ, ಹತ್ಯೆಯನ್ನು ಖಂಡಿಸಿದರು. ರೇಣುಕಾಸ್ವಾಮಿ ಪೋಷಕರ ದುಃಖದಲ್ಲಿ ಅವರ ಜೊತೆ ನಿಲ್ಲಬೇಕು. ಇಂತಹ ಘಟನೆಗಳಿಂದ ಚಿತ್ರರಂಗಕ್ಕೆ ಅಪಖ್ಯಾತಿ ಉಂಟಾಗುತ್ತದೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಯಾರೂ ಕಾನೂನಿಗಿಂತ ಮೇಲಲ್ಲ ಎಂದರು.
Advertisement