ಬಿಗ್ ಬಾಸ್ ಕನ್ನಡ 10 ಸ್ಪರ್ಧಿ ಸಿರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 13ರಂದು ಉದ್ಯಮಿ ಪ್ರಭಾಕರ್ ಭೋರೆಗೌಡ ಜೊತೆ ಸಿರಿ ಹಸೆಮಣೆ ಏರಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿನ ಭೋಗ ನಂದೀಶ್ವರ ದೇವಾಲಯದಲ್ಲಿ ಸಿರಿ ಮತ್ತು ಉದ್ಯಮಿ ಪ್ರಭಾಕರ್ ಮದುವೆ ಗುರುಹಿರಿಯರ ಸಮ್ಮುಖದಲ್ಲಿ ಜರುಗಿದೆ. ಪ್ರಭಾಕರ್ ಅವರು ಮೂಲತಃ ಮಂಡ್ಯದವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದ್ದು, ಜೂನ್ 13ರಂದು ಸರಳವಾಗಿ ಮದುವೆ ನಡೆದಿದೆ. ಸದ್ಯ ನಟಿಯ ಮದುವೆ ಸುದ್ದಿ ಕೇಳಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಎರಡು ದಿನಗಳ ಹಿಂದೆ ಸಿರಿ ಅವರಿಗೆ ಮೈತುಂಬ ಅರಿಷಿಣ ಹಚ್ಚಿರುವ ವಿಡಿಯೋ ವೈರಲ್ ಆಗಿತ್ತು. ಇದು ಸಿನಿಮಾ ಅಥವಾ ಧಾರಾವಾಹಿ ಶೂಟಿಂಗ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸಿರಿ ಅವರು ರಿಯಲ್ ಲೈಫ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೇಗೆ ಪರಿಚಯ ಆಯ್ತು? ಈ ಬಗ್ಗೆ ಮಾಹಿತಿ ಇಲ್ಲ. ಇನ್ನೂ ಮದುವೆ ಬಗ್ಗೆ ಸಿರಿ ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಸಿರಿ ಅವರಿಗೆ ಈಗ 40 ವರ್ಷ ವಯಸ್ಸು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಲರ್ಸ್ ಕನ್ನಡದ ʻರಾಮಾಚಾರಿʼ ಧಾರಾವಾಹಿಯಲ್ಲಿ ನಟಿ ಬಣ್ಣ ಹಚ್ಚಿದ್ದರು. ಈಗ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕೂಡ ಸಿರಿ ಅವರು ನಟಿಸಿದ್ದಾರೆ. 30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಯಾಕೆ ಮದುವೆಯಾಗಲಿಲ್ಲ ಎಂದು ನೆಟ್ಟಿಗರು ನಟಿಗೆ ಹಲವು ಬಾರಿ ಪ್ರಶ್ನೆ ಮಾಡಿದ್ದೂ ಇದೆ.
Advertisement