
ಸಂಜು ವೆಡ್ಸ್ ಗೀತಾ 2 ಚಿತ್ರದ ಹಾಡಿನ ಚಿತ್ರೀಕರಣ ನಡೆದಿದ್ದು ಹಾಡಲ್ಲಿ ಶ್ರೀನಗರ ಕಿಟ್ಟಿ ಮತ್ತು ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಜೊತೆ ತುಪ್ಪದ ಬೆಡಗಿ ರಾಗಿಣಿ ಕುಣಿದು ಕುಪ್ಪಳಿಸಿದ್ದಾರೆ. ಹಾಡಿಗೆ ಮಂಗ್ಲಿ ದನಿಯಾಗಿದ್ದಾರೆ.
ಪ್ರೇಮಕಥೆಗಳತ್ತ ಒಲವು ಹೊಂದಿರುವ ನಿರ್ದೇಶಕ ನಾಗಶೇಖರ್ ಈಗ ಮತ್ತೊಂದು ರೋಮ್ಯಾಂಟಿಕ್ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ. ದಶಕದ ಹಿಂದೆ ಬಿಡುಗಡೆಯಾದ ಸಂಜು ವೆಡ್ಸ್ ಗೀತಾ, (ಶ್ರೀನಗರ ಕಿಟ್ಟಿ ಮತ್ತು ರಮ್ಯಾ) ಭಾರಿ ಹಿಟ್ ಆಗಿತ್ತು. ನಿರ್ದೇಶಕರು ಈಗ 'ಸಂಜು ವೆಡ್ಸ್ ಗೀತಾ 2' ಮೂಲಕ ಹೊಸ ಪ್ರೇಮಕಥೆಯನ್ನು ಹೆಣೆದಿದ್ದಾರೆ. ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಅಭಿನಯದ ಈ ಚಿತ್ರ ಕೊನೆಯ ಹಂತದ ಚಿತ್ರೀಕರಣದಲ್ಲಿದೆ.
ಇತ್ತೀಚೆಗೆ, ಸಂಜು ಮತ್ತು ಗೀತಾ ಅವರ ವಿವಾಹ ವಾರ್ಷಿಕೋತ್ಸವದ ಆಚರಣೆಯ ಸನ್ನಿವೇಶದ ಹಾಡನ್ನು ನಿರ್ಮಾಪಕರು ಚಿತ್ರೀಕರಿಸಿದ್ದಾರೆ. ಈ ವಿಶೇಷ ಪಾರ್ಟಿ ಹಾಡಿನಲ್ಲಿ ರಾಗಿಣಿ ದ್ವಿವೇದಿ ಕೂಡ ಕಾಣಿಸಿಕೊಂಡಿದ್ದಾರೆ. ಕುಂಬಳಗೋಡು ಬಿಜಿಎಸ್ ಪ್ರೌಢಶಾಲೆಯ ಗಾಜಿನ ಮನೆಯಲ್ಲಿ ಚಿತ್ರೀಕರಣ ನಡೆದಿದ್ದು, ಹಾಡಿನಲ್ಲಿ 200 ರಿಂದ 250 ನೃತ್ಯಗಾರರು ಭಾಗವಹಿಸಿದ್ದಾರೆ. ಈ ಹಾಡಿಗೆ ಮಾಂಗ್ಲಿ ಧ್ವನಿ ನೀಡಿದ್ದು, ಬಜರಂಗಿ ಮೋಹನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಕೇವಲ ಎರಡು ಫೈಟ್ ಸೀಕ್ವೆನ್ಸ್‌ಗಳು ಮತ್ತು ಒಂದು ಹಾಡಿಗೆ ಪ್ಯಾಚ್‌ವರ್ಕ್ ಉಳಿದಿದೆ.
ಆಗಸ್ಟ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಗುರಿಯನ್ನು ಹೊಂದಿರುವ ಚಿತ್ರತಂಡವು ಈಗಾಗಲೇ ಪೋಸ್ಟ್-ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡುತ್ತಿದೆ, ಎಡಿಟಿಂಗ್ ಪೂರ್ಣಗೊಂಡಿದ್ದು ಡಬ್ಬಿಂಗ್ ಅಂತಿಮ ಹಂತದಲ್ಲಿದೆ. 'ಸಂಜು ವೆಡ್ಸ್ ಗೀತಾ 2' ಚಿತ್ರೀಕರಣದ ಮಹತ್ವದ ಭಾಗವು ಸ್ವಿಟ್ಜರ್ಲೆಂಡ್‌ನಲ್ಲಿ 15 ದಿನಗಳ ಕಾಲ 11 ಸ್ಥಳಗಳಲ್ಲಿ ನಡೆದಿದೆ.
ಜೊತೆಗೆ ಕುಣಿಗಲ್‌ನಲ್ಲಿ ಐದು ದಿನಗಳ ಕಾಲ ಹಾಡಿನ ದೃಶ್ಯವನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ, ಹಾಸನ ಮತ್ತು ಹಾವೇರಿಯಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮಗಳಲ್ಲಿ ಹಾಡುಗಳನ್ನು ಬಿಡುಗಡೆ ಮಾಡುವ ಯೋಜನೆ ನಡೆಯುತ್ತಿದೆ. ಪವಿತ್ರಾ ಇಂಟರ್‌ನ್ಯಾಶನಲ್ ಮೂವೀ ಮೇಕರ್ಸ್ ಬ್ಯಾನರ್‌ನಡಿಯಲ್ಲಿ ಛಲವಾದಿ ಕುಮಾರ್ ನಿರ್ಮಿಸಿದ ಈ ಚಿತ್ರಕ್ಕೆ ನಾಗಶೇಖರ್ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನವಿದೆ, ಶ್ರೀಧರ್ ವಿ ಸಂಭ್ರಮ್ ಐದು ಹಾಡುಗಳನ್ನು ರಚಿಸಿದ್ದಾರೆ.
'ಸಂಜು ವೆಡ್ಸ್ ಗೀತಾ 2' ಚಿತ್ರದಲ್ಲಿ ಚೇತನ್ ಚಂದ್ರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಸಂಪತ್ ಕುಮಾರ್ ಖಳನಟನಾಗಿ, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ ಮತ್ತು ಗಿಚ್ಚಿ ಗಿಲಿಗಿಲಿ ವಿನೋದ್ ನಟಿಸಿದ್ದಾರೆ. ಇದನ್ನು ಗೋಕುಲ್ ಫಿಲಂಸ್ ಮೂಲಕ 24 ಕ್ರಿಯೇಷನ್ಸ್ ವಿಶ್ವಾದ್ಯಂತ ಬಿಡುಗಡೆ ಮಾಡುವ ಯೋಜನೆಯಿದೆ.
Advertisement