ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ನಿರ್ದೇಶಕನ ಮಾಡಿರುವ ಸಿನಿಮಾ ‘45’ ಚಿತ್ರೀಕರಣ ಬಹುತೇಕ ಅಂತ್ಯವಾಗಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯುತ್ತಿದ್ದು, ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಶಿವರಾಜಕುಮಾರ್ ಮತ್ತು ಉಪೇಂದ್ರ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ ಅವರ ಪಾತ್ರವನ್ನು ರಹಸ್ಯವಾಗಿಟ್ಟುಕೊಂಡು ಶಿವರಾಜ್‌ಕುಮಾರ್ ಮತ್ತು ಉಪೇಂದ್ರ ಅವರ ಫರ್ಸ್ಟ್ ಲುಕ್ ಅನಾವರಣಗೊಳಿಸುವ ಮೂಲಕ ಅರ್ಜುನ್ ಅಭಿಮಾನಿಗಳಿಗೆ ಈ ಸಸ್ಪೆನ್ಸ್ ನೀಡಿದ್ದರು. ಅಂತಿಮವಾಗಿ ದೀಪಾವಳಿಯ ಆಸುಪಾಸಿನಲ್ಲಿ ರಾಜ್ ಅವರ ಟೀಸರ್ ಬಿಡುಗಡೆ ಮಾಡಿ ಎಲ್ಲಾ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ.
ಈಗ ಬಿಡುಗಡೆ ಆಗಿರುವ ರಾಜ್ ಬಿ ಶೆಟ್ಟಿ ಅವರ ಕ್ಯಾರೆಕ್ಟರ್ ಟೀಸರ್ ಬ್ಲಾಕ್ ಆಂಡ್ ವೈಟ್ನಲ್ಲಿ ಆರಂಭವಾಗುತ್ತದೆ. ರಾಜ್ ಬಿ ಶೆಟ್ಟಿಯನ್ನು ಇಬ್ಬರು ರೌಡಿಗಳು ಅಡ್ಡಗಟ್ಟಿದ್ದಾರೆ. ಅವರೊಟ್ಟಿಗೆ ತಮಾಷೆಯ ದನಿಯಲ್ಲಿ ಮಂಗಳೂರು ಶೈಲಿಯ ಕನ್ನಡದಲ್ಲಿ ಮಾತನಾಡುವ ರಾಜ್ ಬಿ ಶೆಟ್ಟಿ, ರೌಡಿಗಳು ಚಾಕು ತೆಗೆದು ಹೆದರಿಸಲು ಪ್ರಯತ್ನಿಸಿದಾಗ ‘ನನ್ನ ಮೈಮುಟ್ಟುವ ಪ್ರಯತ್ನ ಮಾಡಬೇಡಿ, ನಮ್ಮಣ್ಣ ನಾನು ಚಿಕ್ಕವನಿದ್ದಾಗ ಕರಾಟೆ ಕ್ಲಾಸ್ಗೆ ಕಳಿಸಿದ್ದ’ ಎನ್ನುತ್ತಾ ಕರಾಟೆ ಪ್ರತಿಭೆ ಪ್ರದರ್ಶಿಸಲು ಮುಂದಾಗುತ್ತಾರೆ. ಅಲ್ಲಿಗೆ ಟೀಸರ್ ಅಂತ್ಯವಾಗಿದೆ. ಟೀಸರ್ ನೋಡಿದವರಿಗೆ ರಾಜ್ ಬಿ ಶೆಟ್ಟಿ ಅವರದ್ದು ಹಾಸ್ಯ ಭರಿತವಾಗಿರುವ ನಾಯಕ ಪಾತ್ರ ಅನಿಸುತ್ತದೆ. ಮಾತ್ರವಲ್ಲ, ಟೀಸರ್ನಲ್ಲಿ ರಾಜ್ ಬಿ ಶೆಟ್ಟಿಯನ್ನು ಎದುರಾಗಿ ಚಾಕು ತೋರಿಸಿ ಹೆದರಿಸಲು ಯತ್ನಿಸಿರುವ ಇಬ್ಬರು ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಎನ್ನುವ ಅನುಮಾನವೂ ಮೂಡುತ್ತದೆ. ಏಕೆಂದರೆ ಅವರ ಒಬ್ಬರ ಚಾಕುವಿಗೆ ‘ಓಂ’ ಹೆಸರಿನ ಚೈನ್ ಇದ್ದರೆ ಇನ್ನೊಬ್ಬರ ಚಾಕುವಿಗೆ ತ್ರಿಶೂಲವಿದೆ.
ಶರ್ಟ್, ಟೈ ಹಾಕಿಕೊಂಡು ಕಾರ್ಪೊರೇಟ್ ಉದ್ಯೋಗಿಯಂತೆ ರಾಜ್ ಬಿ ಶೆಟ್ಟಿ ಕಾಣಿಸುತ್ತಿದ್ದಾರೆ. ಕೈಯಲ್ಲಿ ಕಡಗ ಸಹ ಇದೆ. ಈಗ ಕಾರ್ಪೊರೇಟ್ ಉದ್ಯೋಗ ಮಾಡುತ್ತಿರುವ ಆದರೆ ಫ್ಲ್ಯಾಶ್ಬ್ಯಾಕ್ನಲ್ಲಿ ರೌಡಿಸಂ ಹಿಸ್ಟರಿ ಇರುವ ಪಾತ್ರ ಇವರದ್ದಾಗಿರಬಹುದು ಎಂಬ ಅನುಮಾನವೂ ಸಹ ಮೂಡುತ್ತಿದೆ. ಈ ಟೀಸರ್ ಹಂಚಿಕೊಂಡಿರುವ ನಿರ್ದೇಶಕ ಅರ್ಜುನ್ ಜನ್ಯ, ‘ಕರಾಟೆ ಪಟು ಬರ್ತಿದ್ದಾರೆ ಎಲ್ಲಾರು ಹುಷಾರು’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಸಿನಿಮಾದ ಬಗ್ಗೆ ಹೆಚ್ಚಿನ ಅಪ್ ಡೇಟ್ ಗಳನ್ನು ಮುಂದಿನ ದಿನದಲ್ಲಿ ಹಂಚಿಕೊಳ್ಳುವುದಾಗಿ ಅರ್ಜುನ್ ಜನ್ಯ ಹೇಳಿದ್ದಾರೆ. ಸೂರಜ್ ಪ್ರೊಡಕ್ಷನ್ ಅಡಿಯಲ್ಲಿ ರಮೇಶ್ ರೆಡ್ಡಿ ನಿರ್ಮಿಸಿರುವ 45 ಸಿನಿಮಾಗೆ ಅರ್ಜುನ್ ಜನ್ಯ ನಿರ್ದೇಶನ ಮಾತ್ರವಲ್ಲದೆ ಚಿತ್ರದ ಸಂಗೀತವನ್ನೂ ಸಹ ಸಂಯೋಜಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ ಹೊಣೆ ಹೊತ್ತಿದ್ದಾರೆ.
Advertisement