ಸೆಂಚರಿ ಸ್ಟಾರ್ ಶಿವರಾಜ್‌ಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರ ನವೆಂಬರ್ 15 ರಂದು ತೆರೆ ಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಶಿವಣ್ಣ ಅವರು ನವೆಂಬರ್ 14 ರಂದು ಮಕ್ಕಳ ದಿನಾಚರಣೆಯ ವಿಶೇಷ ದಿನದಂದು 'A For ಆನಂದ್' ಎಂಬ ಹೊಸ ಸಿನಿಮಾ ಘೋಷಿಸಿದ್ದಾರೆ.
ಪ್ರತಿ ಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುವ ಶಿವಣ್ಣ ಅವರು ಈ ಬಾರಿ ಮೆಷ್ಟ್ರು ಆಗಿದ್ದಾರೆ. `ಸುಂದರ ಕಾಂಡ’ದ ಸಿನಿಮಾದಲ್ಲಿ ಟೀಚರ್ ಆಗಿ ಅಭಿನಯಿಸಿದ್ದ ಶಿವಣ್ಣ ಈಗ ಬಹಳ ವರ್ಷಗಳ ನಂತರ ಮತ್ತೆ ಶಿಕ್ಷಕರಾಗುತ್ತಿದ್ದಾರೆ.
ಶ್ರೀನಿ ನಿರ್ದೇಶವದ ಈ ಎ ಫಾರ್ ಆನಂದ್, ಶಿಕ್ಷಕರು ಮತ್ತು ಅವರ ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಸಂಭ್ರಮಿಸುವ ವಿಶೇಷ ಮತ್ತು ಹೃದಯಸ್ಪರ್ಶಿ ಕೌಟುಂಬಿಕ ಮನರಂಜನೆಯ ಚಿತ್ರವಾಗಿದೆ. ಶಿವರಾಜಕುಮಾರ್ ಅವರ ಪತ್ನಿ ಗೀತಾ ಅವರ ಬ್ಯಾನರ್‌ನ ಗೀತಾ ಪಿಕ್ಚರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.
ಮಕ್ಕಳ ದಿನಾಚರಣೆಯ ಎ ಫಾರ್ ಆನಂದ್ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಫಸ್ಟ್‌ಲುಕ್‌ನಲ್ಲಿ ಮಕ್ಕಳ ಟ್ರೈನ್ ಮೇಲೆ ಶಿವಣ್ಣ ಬೆತ್ತ ಹಿಡಿದು ಏನೋ ತೋರಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಪೋಸ್ಟರ್ ಕಂಡು ಫ್ಯಾನ್ಸ್ ಖುಷ್ ಆಗಿದ್ದಾರೆ.
ಕರ್ನಾಟಕದ ಹೃದಯ ಭಾಗದಲ್ಲಿ, ಹದಿನಾಲ್ಕು ಹಳ್ಳಿಗಳ ಕನಸುಗಳು ಒಂದೇ ಶಾಲೆಯಲ್ಲಿ ಚಿಗುರುತ್ತವೆ. ಇಲ್ಲಿ ಅಕ್ಷರದ ಅರುಣೋದಯ ‘A for Apple’ನಿಂದ ಆರಂಭವಾಗುವುದಿಲ್ಲ, ಬದಲು ಬೆಳಕಿನ ಬೀಜ ಬಿತ್ತಿದ ಗುರುವಿನ ಹೆಸರಿನಿಂದ ಮೊಳೆಯುತ್ತದೆ ಅದೇ A for ಆನಂದ್ ಎಂದು ಪೋಸ್ಟರ್ ಜತೆ ಕ್ಯಾಪ್ಷನ್ ಕೊಟ್ಟಿದ್ದಾರೆ.
ಆನಂದ್ ಕೇವಲ ಶಿಕ್ಷಕರಲ್ಲ; ಅವರು ತನ್ನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಮತ್ತು ಸ್ನೇಹಿತ. ಈ ಚಿತ್ರವು ನಂಬಿಕೆ, ಗೌರವದ ಪ್ರಾಮುಖ್ಯತೆ ಮತ್ತು ಮಕ್ಕಳ ಜೀವನದ ಮೇಲೆ ಶಿಕ್ಷಕರು ಬೀರಬಹುದಾದ ಶಾಶ್ವತ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಎ ಫಾರ್ ಆನಂದ್ ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ರಂಜಿಸುವ ಚಿತ್ರವಾಗಿದೆ ಎಂದು ಚಿತ್ರ ನಿರ್ಮಾಪಕರು ಹೇಳಿದ್ದಾರೆ.
Advertisement