ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಅವರ ತಂದೆ ಜೋಸೆಫ್ ಪ್ರಭು ಅವರು ಶುಕ್ರವಾರ ಸಂಜೆ ನಿಧನರಾಗಿದ್ದು, ಈ ದುಃಖದ ಸುದ್ದಿಯನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಭಾವುಕ ಪೋಸ್ಟ್ ಮಾಡಿರುವ ನಟಿ ಸಮಂತಾ ಅವರು, ' ನಾವು ಮತ್ತೆ ಭೇಟಿಯಾಗುವವರೆಗೂ ಅಪ್ಪ' ಎಂದು ಬರೆದು ಒಡೆದ ಹೃದಯದ ಇಮೋಜಿಗಳೊಂದಿಗೆ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ನೋಡಿದ ಅಭಿಮಾನಿಗಳು ಸಮಂತಾ ತಂದೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ನಾಗಚೈತನ್ಯರಿಂದ ದೂರವಾದ ನಂತರ ಒಂಟಿಯಾಗಿರುವ ಸಮಂತಾ ಪಾಲಿಗೆ ತಂದೆಯ ಸಾವು ಮತ್ತೊಂದು ಆಘಾತ ನೀಡಿದೆ. ವಿಚ್ಚೇದನವಾದ ಒಂದು ವರ್ಷದ ನಂತರ ಸಮಂತಾ ಅವರ ತಂದೆ ಜೋಸೆಫ್ ಅವರು ಮಗಳ ಮದುವೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ತಂದೆ ಜೋಸೆಫ್ ರುತ್ ಪ್ರಭು ಅವರ ಸಾವು ಸಮಂತಾರನ್ನು ಮತ್ತಷ್ಟು ದುಃಖಕ್ಕೀಡು ಮಾಡುವಂತೆ ಮಾಡಿದೆ.
ಎಎನ್‌ಐ ಜೊತೆ ಮಾತನಾಡಿದ ಸಮಂತಾ ತಂಡದ ಸದಸ್ಯರೊಬ್ಬರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ವಕ್ತಾರರು ಅಭಿಮಾನಿಗಳು ಮತ್ತು ಮಾಧ್ಯಮದ ಸದಸ್ಯರಿಗೆ ತಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ವಿನಂತಿಸಿದ್ದಾರೆ.
ತೆಲುಗು ಆಂಗ್ಲೋ- ಇಂಡಿಯನ್ ಆಗಿರುವ ಜೋಸೆಫ್ ರುತ್ ಪ್ರಭು ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
Advertisement