
ಗುರುಮೂರ್ತಿ ನಿರ್ದೇಶನದ ಹಾಗೂ ಪ್ರಿಯಾಂಕಾ ಉಪೇಂದ್ರ ಅಭಿನಯದ ಮುಂಬರುವ ಚಿತ್ರ ಉಗ್ರಾವತಾರದ ಟ್ರೇಲರ್ ಬಿಡುಗಡೆಯಾಗಿದ್ದು, ಈ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ ಪತಿ, ರಿಯಲ್ ಸ್ಟಾರ್ ಉಪೇಂದ್ರ ಅವರು, ನಿರ್ದೇಶಕರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದ ಟ್ರೇಲರ್ ನಲ್ಲಿ ನಿರ್ದೇಶಕರ ಶ್ರಮ ಎದ್ದು ಕಾಣಿಸುತ್ತಿದೆ. ಆದಾಗ್ಯೂ, ಅವರು ಸ್ವಲ್ಪ ಆತಂಕದಲ್ಲಿದ್ದಾರೆ. ಮೊದಲ ಬಾರಿ ನನಗೂ ಅದೇ ಆಗಿತ್ತು. ಆದ್ರೆ ಭವಿಷ್ಯದಲ್ಲಿ ನೀವು ಸ್ಟಾರ್ ನಿರ್ದೇಶಕರಾಗುತ್ತೀರಿ. ಮನೆಯಲ್ಲಿ ಪ್ರಿಯಾಂಕಾ ಅವರ ಉಗ್ರಾವತಾರವನ್ನು ನಾನು ನೋಡಿದ್ದೇನೆ. ಮುಂದೆ ನೀವುಗಳು ನೋಡುತ್ತೀರಿ. ಆದರೆ ಪೊಲೀಸರು ಗ್ಲ್ಯಾಮರಸ್ ಆಗಿ ಕಾಣಿಸಬಾರದು. ಅದೇ ನನ್ನ ಕಾಳಜಿ. ಗ್ಲ್ಯಾಮರಸ್ ಆಗಿ ಕಂಡರೆ ರೌಡಿಗಳನ್ನು ಹೇಗೆ ಸದೆಬಡಿಯುತ್ತಿರಿ" ಎಂದು ಹಾಸ್ಯ ಚಟಾಕಿ ಹಾರಿಸಿದರು.
"ನಿಮ್ಮ ಆರ್ಶೀವಾದ ಅನೇಕ ಹೊಸ ಕಲಾವಿದರು ಯಶಸ್ವಿಯಾಗಲು ಸಹಾಯ ಮಾಡುತ್ತದೆ. ಹತ್ತಾರು ಕುಟುಂಬಗಳ ದೀಪ ಬೆಳಗುತ್ತದೆ. ಸಣ್ಣಪುಟ್ಟ ತಪ್ಪುಗಳು ಇರುತ್ತವೆ. ಅದನ್ನು ಕ್ಷಮಿಸುವಂತಹ ದೊಡ್ಡ ಗುಣ ನಮ್ಮ ಕನ್ನಡಿಗರಲ್ಲಿದೆ. ಸಿನಿಮಾ ನೋಡದೇ ಅಭಿಪ್ರಾಯ ತಿಳಿಸಬೇಡಿ" ಎಂದು ಕೇಳಿಕೊಂಡರು.
ಬಳಿಕ ಪ್ರಿಯಾಂಕಾ ಉಪೇಂದ್ರ ಕೂಡ ತಮ್ಮ ಭಾವನೆಗಳನ್ನು ಹಂಚಿಕೊಂಡರು. "ಈ ಪಾತ್ರವನ್ನು ನನ್ನಿಂದ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಕಾಡಿತ್ತು. ಭಾರತದಲ್ಲಿ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಯುತ್ತಲೇ ಇದೆ. ಸ್ವಯಂರಕ್ಷಣೆ, ಸುರಕ್ಷ ಆ್ಯಪ್ ಜೊತೆಗೆ ಪೊಲೀಸರಿಗೂ ಗೌರವ ಕೊಡಿ. ಅವರು ಸಮಾಜದ ರಕ್ಷಣೆ ಜತೆಗೆ ಸಹಾಯ ಮಾಡುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ" ಎಂದರು.
ಈ ಪಾತ್ರ ಒಪ್ಪಿಕೊಂಡಾಗಿನಿಂದ ಗುರುಮೂರ್ತಿ ಅವರು ನೀಡಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ ಪ್ರಿಯಾಂಕಾ, ನಾವು ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಹೇಗೆ ನಡೆಸಿಕೊಳ್ಳುತ್ತೇವೋ ಅದೇ ರೀತಿಯಲ್ಲಿ ಹೊರಗಿನ ಹೆಣ್ಣು ಮಕ್ಕಳನ್ನೂಕಾಣಬೇಕು ಎಂದು ಮಹಿಳೆಯರಿಗೆ ಗೌರವ ನೀಡುವ ಅಗತ್ಯವನ್ನು ಎತ್ತಿ ಹೇಳಿದರು.
ಸಮಾಜದಲ್ಲಿ ನಡೆಯುವಂತಹ ಒಂದಷ್ಟು ನೈಜ ಅಂಶಗಳನ್ನು ಚಿತ್ರರೂಪಕ್ಕೆ ಬಳಸಲಾಗಿದೆ. ಮೇಡಂ ಈ ಚಿತ್ರದಿಂದ ಆ್ಯಕ್ಷನ್ ಕ್ವೀನ್ ಆಗಿದ್ದಾರೆ. ಐದು ಸಾಹಸಗಳು ವಿಭಿನ್ನವಾಗಿದೆ. ಇದಕ್ಕಾಗಿ ಅವರು ದೇಹಕ್ಕೆ ಕಸರತ್ತು ನೀಡಿ ಕ್ಯಾಮಾರಾ ಎದುರು ಬಂದಿದ್ದಾರೆ. ನಾಲ್ಕು ಭಾಷೆಯ ಡಬ್ಬಿಂಗ್ ಮುಗಿದಿದೆ. ಇನ್ನೇನಿದ್ದರೂ ಪ್ರಚಾರ ಶುರು ಮಾಡಬೇಕು. ದಯವಿಟ್ಟು ಟಾಕೀಸ್‌ಗೆ ಬನ್ನಿ, ಪ್ರೋತ್ಸಾಹಿಸಿ" ಎಂದು ನಿರ್ದೇಶಕ ಗುರುಮೂರ್ತಿ ಕೇಳಿಕೊಂಡರು.
Advertisement