
ನಟ ಡಾಲಿ ಧನಂಜಯ್ ಸ್ಯಾಂಡಲ್ ವುಡ್ ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ, ಅವರ ಕೈಯ್ಯಲ್ಲಿ ಸದ್ಯ ಹಲವು ಸಿನಿಮಾಗಳಿವೆ. ಸದ್ಯ ಶಂಕರ್ ಗುರು ಅವರ ಅಣ್ಣಾ ಫ್ರಮ್ ಮೆಕ್ಸಿಕೋ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಇದರ ಜೊತೆಗೆ ಸುಕೇಶ್ ನಾಯಕ್ ನಿರ್ದೇಶನದ ಐತಿಹಾಸಿಕ ಚಲನಚಿತ್ರ ಹಲಗಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಟಿ.ಎಸ್.ನಾಗಾಭರಣ ನಿರ್ದೇಶನದ ನಾಡಪ್ರಭು ಕೆಂಪೇಗೌಡ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ ಹಾಗೂ ಉತ್ತರಕಾಂಡದ ತಯಾರಿಯಲ್ಲಿದ್ದಾರೆ. ಇವುಗಳ ನಡುವೆ ಹೊಸ ಪ್ರಾಜೆಕ್ಟ್‌ಗಾಗಿ ನಿರ್ದೇಶಕ ಕೆ ಮಾದೇಶ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ರಾಮ್, ಗಜ ಮತ್ತು ಬೃಂದಾವನದಂತಹ ಹಿಟ್‌ಗಳಿಗೆ ಹೆಸರುವಾಸಿಯಾದ ಕೆ ಮಾದೇಶ್,ಸಿನಿಮಾ ಎಕ್ಸ್ ಪ್ರೆಸ್ ಗೆ ಸುದ್ದಿಯನ್ನು ಖಚಿತಪಡಿಸಿದ್ದಾರೆ, ಹೊಸ ಸಿನಿಮಾ ಆರಂಭಿಸುವ ಕುರಿತು ನಾವು ಚರ್ಚೆಯಲ್ಲಿದ್ದೇವೆ, ನಾನು ಧನಂಜಯ್‌ಗೆ ಕಥೆ ಹೇಳಿದ್ದೇನೆ, ಅದನ್ನು ಅವರು ಇಷ್ಟಪಟ್ಟಿದ್ದಾರೆ. ನಾವು ಹಿಂದಿನ ಪ್ರಾಜೆಕ್ಟ್ ಗಳ ಕಮಿಟ್ ಮೆಂಟ್ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ, ಆದರೆ ಇದು ಡಾಲಿಗೆ ಔಟ್ ಅಂಡ್ ಔಟ್ ಮಾಸ್ ಎಂಟರ್‌ಟೈನರ್ ಆಗಲಿದೆ ಎಂದಿದ್ದಾರೆ. ಈ ಕಥೆಯು ಧನಂಜಯ್‌ಗೆ ನಿರ್ದಿಷ್ಟವಾಗಿ ಹೊಂದುತ್ತದೆ. ಇಂದಿನ ಸಿನಿಮಾ ಪ್ರವೃತ್ತಿಗೆ ಸರಿಯಾಗಿ ಹೋಲಿಕೆಯಾಗುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. "ಒಮ್ಮೆ ಪ್ರೊಡಕ್ಷನ್ ಹೌಸ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕರೆ, ನಾವು ಮುಂದುವರೆಯಲು ಸಿದ್ಧರಾಗುತ್ತೇವೆ" ಎಂದು ಮಾದೇಶ್ ತಿಳಿಸಿದ್ದಾರೆ.
Advertisement