ನಟ ವಿಜಯ್ ಅಭಿನಯದ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (GOAT) ಚಿತ್ರ ಬಿಡುಗಡೆಯಾಗಿ ಮುನ್ನುಗುತ್ತಿದೆ. ಮೊದಲ ದಿನ ಭರ್ಜರಿ ಗಳಿಕೆ ಮಾಡಿ ಹಲವು ಚಿತ್ರಗಳ ದಾಖಲೆ ಮುರಿದಿದ್ದ ಗೋಟ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೀಗಾಗಿ ವಿಜಯ್ ನಟನೆಯ ಗೋಟ್ ಚಿತ್ರ ಎರಡನೇ ದಿನಕ್ಕೆ ಗಳಿಕೆಯಲ್ಲಿ ಭಾರಿ ಕುಸಿತ ಕಂಡಿದೆ. ಗ್ರೇಟೆಸ್ಟ್ ಆಫ್ ಆಲ್ ಟೈಮ್ ಭಾರತದಲ್ಲಿ ಮೊದಲ ದಿನವೇ 44 ಕೋಟಿ ರೂ. ಗಳಿಕೆ ಮೂಲಕ ಜಗತ್ತಿನಾದ್ಯಂತ 126 ಕೋಟಿ ರೂಪಾಯಿ ಗಳಿಸಿತ್ತು. ಆದರೆ ಎರಡನೇ ದಿನದಲ್ಲಿ ಚಿತ್ರದ ಗಳಿಕೆ ಗಣನೀಯವಾಗಿ ಕಡಿಮೆಯಾಗಿದೆ. ಅಂಕಿಅಂಶಗಳನ್ನು ನಂಬುವುದಾದರೆ, ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ತನ್ನ ಎರಡನೇ ದಿನ ಭಾರತದಲ್ಲಿ ಕೇವಲ 15 ಕೋಟಿ ಗಳಿಸಿದೆ ಎಂದು ಹೇಳಲಾಗುತ್ತಿದೆ.
ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಚಿತ್ರದಲ್ಲಿ ತಲಪತಿ ವಿಜಯ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಸೂಪರ್ ಸ್ಟಾರ್ ಜೊತೆಗೆ ಮೀನಾಕ್ಷಿ ಚೌಧರಿ, ಮಾಳವಿಕಾ ಶರ್ಮಾ, ಪ್ರಶಾಂತ್ ಮತ್ತು ಪ್ರಭುದೇವ ಅವರಂತಹ ನಟರು ಚಿತ್ರದಲ್ಲಿದ್ದಾರೆ. ಈ ಚಿತ್ರವನ್ನು ವೆಂಕಟ್ ಶಂಕರ್ ಪ್ರಭುರಾಜ ನಿರ್ದೇಶಿಸಿದ್ದಾರೆ.
ಎಜಿಎಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ 'ಗೋಟ್' ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸಿದ್ದಾರೆ. ನಿರ್ಮಾಪಕಿ ಅರ್ಚನಾ ಕಲ್ಪಾತಿ ಪ್ರಕಾರ, 'GOAT' ಚಿತ್ರದ ಬಜೆಟ್ ಜಿಎಸ್‌ಟಿ ಸೇರಿದಂತೆ 380 ಕೋಟಿ ರೂಪಾಯಿ ವೆಚ್ಚವಾಗಿದೆ.
ಇನ್ನು ಹೊಸ ರಾಜಕೀಯ ಪಕ್ಷ ಕಟ್ಟಿರುವ ನಟ ವಿಜಯ್ ಇದೇ ತಮ್ಮ ಕೊನೆಯ ಚಿತ್ರ ಎಂದು ಘೋಷಿಸಿದ್ದರು. ಆದರೆ ವಿಜಯ್ ಅಂದುಕೊಂಡಂತೆ ಅವರ ಚಿತ್ರ ಕಲೆಕ್ಷನ್ ಕಾಣದಿರುವುದು ಆತಂಕಕ್ಕೂ ಕಾರಣವಾಗಿದೆ.
Advertisement