ಬೆಂಗಳೂರು: ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಬರ್ಬರವಾಗಿ ಹತ್ಯೆಗೀಡಾದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ಇಂಚಿಂಚು ಮಾಹಿತಿ ಇಲ್ಲಿದೆ.
ರೇಣುಕಾಸ್ವಾಮಿ ಮತ್ತು ಪವಿತ್ರಾಗೌಡ ಹೆಸರಲ್ಲಿ ಪವನ್ ನಡೆಸಿದ ಮೇಸೆಜ್ ಗಳು ಬಹಿರಂಗಗೊಂಡಿದ್ದು ಅದರಲ್ಲಿ ರೇಣುಕಾಸ್ವಾಮಿ ಪವಿತ್ರಾಗೌಡಗೆ ನೀನು ಸೂಪರ್ ಬ್ಯೂಟಿ, ನನ್ನ ಜೊತೆ ರಹಸ್ಯವಾಗಿ ಲಿವ್-ಇನ್ ಸಂಬಂಧ ಹೊಂದುವಂತೆ ಕೇಳಿಕೊಂಡಿದ್ದನು ಎಂದು ಬೆಂಗಳೂರು ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ನಿಂದ ಬಹಿರಂಗಗೊಂಡಿದೆ. ಆರೋಪಿಗಳ ಮೊಬೈಲ್ನಲ್ಲಿ ರೇಣುಕಾಸ್ವಾಮಿ ಕೊಲೆ ಸಂಬಂಧ ಸಾಕಷ್ಟು ರಹಸ್ಯಗಳೂ ಬಯಲಾಗಿವೆ. ಪವಿತ್ರಾ ಮೊಬೈಲ್ನಲ್ಲಿ ಕೊಲೆ ಪ್ರಕರಣ ಸಂಬಂಧ 65 ಫೋಟೋ ಪತ್ತೆ ಆಗಿವೆ. 17 ಸ್ಕ್ರೀನ್ ಶಾಟ್, ಸ್ವಾಮಿ ಕಳಿಸಿದ್ದ 20 ಅಶ್ಲೀಲ ಮೆಸೇಜ್ ಲಭ್ಯ ಆಗಿವೆ. ಪವಿತ್ರಗೌಡ ಜೊತೆ ದರ್ಶನ್ ನಡೆಸಿದ್ದ ವಾಟ್ಸಾಪ್ ಚಾಟ್ ಲಭ್ಯ ಆಗಿದೆ.
ಮೊದಲಿಗೆ ರೇಣುಕಾಸ್ವಾಮಿ ಇನ್ ಸ್ಟಾಗ್ರಾಂನಲ್ಲಿ ಪವಿತ್ರಾಗೌಡಗೆ ಮೇಸೆಜ್ ಮಾಡಲು ಶುರು ಮಾಡಿದ್ದನು. ನೀವು Busy ಇರ್ತೀರಾ. ನಮಸ್ಕಾರ, ದಯವಿಟ್ಟು ನಿಮ್ಮ ಮೊಬೈಲ್ ಸಂಖ್ಯೆ ಕಳುಹಿಸು. ವಾವ್, ಸೂಪರ್ ಬ್ಯೂಟಿ. ಸೆಕ್ಸಿ ಫಿಗರ್ ನೀವು, ನನ್ನೊಂದಿಗೆ ರಹಸ್ಯ ಲಿವ್-ಇನ್ ಸಂಬಂಧ ಇಟ್ಕೋತೀರಾ? ನಾನು ನಿಮಗೆ ಪ್ರತಿ ತಿಂಗಳು 10,000 ರೂಪಾಯಿ ಕೊಡ್ತೀನಿ ಎಂದು ಪವಿತ್ರಾಗೌಡಗೆ ರೇಣುಕಾಸ್ವಾಮಿ ಮೇಸೆಜ್ ಮಾಡುತ್ತಿದ್ದನು. ರೇಣುಕಾಸ್ವಾಮಿ ಖಾಸಗಿ ಭಾಗಗಳ ಅಸಭ್ಯ ಸಂದೇಶಗಳು ಮತ್ತು ಫೋಟೋಗಳನ್ನು ನೋಡಿ ಸಹಿಸಲು ಸಾಧ್ಯವಾಗದ ಪವಿತ್ರಾ ಗೌಡ, ಪ್ರಕರಣದ ಮತ್ತೊಬ್ಬ ಆರೋಪಿ ಪವನ್‌ಗೆ ರೇಣುಕಾಸ್ವಾಮಿ ಸಂದೇಶಗಳನ್ನು ನಿಭಾಯಿಸಲು ಕೇಳಿದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ರೇಣುಕಾಸ್ವಾಮಿಯ ಜಾಡು ಹಿಡಿಯಲು ಪವನ್ ಪವಿತ್ರಾ ಗೌಡ ಸೋಗಿನಲ್ಲಿ ಚಾಟಿಂಗ್ ಆರಂಭಿಸಿದ್ದನು. ರೇಣುಕಾಸ್ವಾಮಿ ಇರುವ ಜಾಗವನ್ನು ತಿಳಿದುಕೊಳ್ಳಲು ಆರೋಪಿ ಪವನ್ ನಯವಾಗಿ ಚಾಟಿಂಗ್ ಮಾಡಲು ಆರಂಭಿಸಿದ್ದನು. ಅಲ್ಲದೆ ರೇಣುಕಾಸ್ವಾಮಿ ತಾನು ಕೆಲಸ ಮಾಡುತ್ತಿದ್ದ ಫಾರ್ಮಸಿ ಅಂಗಡಿಯ ಹೊರಗೆ ನಿಂತು ಫೋಟೋವನ್ನು ತೆಗೆದು ಕಳುಹಿಸುವಂತೆ ಕೇಳಿದ್ದಾನೆ. ಹೀಗೆ ರೇಣುಕಾಸ್ವಾಮಿ ಕಳುಹಿಸಿದ ಫೋಟೋಗಳನ್ನು ಸಹ ರಿಟ್ರೀವ್ ಮಾಡಿರುವ ಪೊಲೀಸರು ತಾವು ಸಲ್ಲಿಸಿರುವ 3,991 ಪುಟಗಳ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರು ಪ್ರಕರಣದ ಆರೋಪಪಟ್ಟಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಇನ್ನು ಪೊಲೀಸರು ಪ್ರಕರಣದ ಸಾಕ್ಷಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಮೇಲೆ ಹೆಚ್ಚು ನಿಗಾ ಇಟ್ಟಿದ್ದಾರೆ. ರೇಣುಕಾಸ್ವಾಮಿಯನ್ನು ಶೆಡ್‌ಗೆ ಕರೆತರುವ ಸಂಪೂರ್ಣ ಪ್ರಕ್ರಿಯೆ ಮತ್ತು ದರ್ಶನ್ ಮತ್ತು ಆತನ ಸಂಗಾತಿ ಪವಿತ್ರಾ ಗೌಡ ಸೇರಿದಂತೆ ಆರೋಪಿಗಳು ನಡೆಸಿದ ದೌರ್ಜನ್ಯವನ್ನು ನೋಡಿರುವ ಶೆಡ್‌ನ ವಾಚ್‌ಮನ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು ಪ್ರಕರಣದ ನಿರ್ಣಾಯಕ ಸಾಕ್ಷಿಯಾಗಿ ಪರಿಗಣಿಸಿದ್ದಾರೆ. ಶೆಡ್‌ನಲ್ಲಿರುವ ಇಬ್ಬರು ಕೆಲಸಗಾರರನ್ನು ಎರಡನೇ ಮತ್ತು ಮೂರನೇ ಪ್ರತ್ಯಕ್ಷದರ್ಶಿಗಳು ಎಂದು ಪರಿಗಣಿಸಲಾಗುತ್ತದೆ. ರೇಣುಕಾಸ್ವಾಮಿಗೆ ಹೇಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು ಎಂಬುದನ್ನು ಪೊಲೀಸರ ಮುಂದೆ ಬಹಿರಂಗಪಡಿಸಿದ್ದಾರೆ.
ದರ್ಶನ್ ರೇಣುಕಾಸ್ವಾಮಿಯ ಎದೆಗೆ ಪದೇ ಪದೇ ಒದೆಯುತ್ತಿದ್ದು, ಇದರಿಂದ ಎದೆಯ ಮೂಳೆಗಳು ಮುರಿದಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ. ಬಳಿಕ ದರ್ಶನ್ ರೇಣುಕಾಸ್ವಾಮಿಯನ್ನು ಎತ್ತಿಕೊಂಡು ಟ್ರಕ್‌ಗೆ ಎಸೆದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದೆ. ಆಗ ಪವಿತ್ರಾ ಗೌಡಗೆ ಕಳುಹಿಸಿದ್ದ ಖಾಸಗಿ ಭಾಗದ ಫೋಟೋ ತೋರಿಸಿ ದರ್ಶನ್ ರೇಣುಕಾಸ್ವಾಮಿ ಖಾಸಗಿ ಭಾಗಕ್ಕೆ ಒದ್ದಿದ್ದು, ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿದ್ದನು. ದರ್ಶನ್ ನಡೆಸಿದ ಹಲ್ಲೆ ಮಾರಣಾಂತಿಕವಾಗಿದ್ದು, ರೇಣುಕಾಸ್ವಾಮಿ ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ಚಾರ್ಜ್ ಶೀಟ್‌ನಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಗಳನ್ನು ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಪಟ್ಟಿಯಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧವನ್ನೂ ಉಲ್ಲೇಖಿಸಲಾಗಿದೆ. ಪವಿತ್ರಾ ಗೌಡಳನ್ನು ಮದುವೆಯಾಗಿಲ್ಲ ಎಂದು ದರ್ಶನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಅವರು ಲಿವ್-ಇನ್ ಸಂಬಂಧದಲ್ಲಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಹತ್ಯೆಯ ನಂತರ ಆತಂಕಗೊಂಡಿದ್ದ ದರ್ಶನ್ ಮತ್ತು ಪ್ರಕರಣದಲ್ಲಿ ಬಂಧಿಸುವ ಮೊದಲು ಮೈಸೂರು ನಗರದ ಸ್ಟಾರ್ ಹೋಟೆಲ್‌ನಲ್ಲಿ ಇತರ ಆರೋಪಿಗಳೊಂದಿಗೆ ಮಾತನಾಡುತ್ತಿದ್ದ ಫೋಟೋಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಜೂನ್ 8ರಂದು ಬೆಂಗಳೂರಿನಲ್ಲಿ ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಭೀಕರ ಹತ್ಯೆ ನಡೆದಿತ್ತು. ರೇಣುಕಾಸ್ವಾಮಿಯನ್ನು ಅವರ ಹುಟ್ಟೂರಾದ ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತಂದು ಶೆಡ್‌ನಲ್ಲಿಟ್ಟು ಚಿತ್ರಹಿಂಸೆ ನೀಡಿ ಸಾಯಿಸಲಾಗಿತ್ತು. ಕೊಲೆಯ ನಂತರ ಶವವನ್ನು ಕಾಲುವೆಗೆ ಎಸೆಯಲಾಗಿತ್ತು. ಖಾಸಗಿ ಅಪಾರ್ಟ್‌ಮೆಂಟ್ ಕಟ್ಟಡದ ಭದ್ರತಾ ಸಿಬ್ಬಂದಿ ಶವವನ್ನು ನಾಯಿಗಳ ಹಿಂಡು ಎಳೆದಾಡುತ್ತಿದ್ದುದ್ದನ್ನು ನೋಡಿದ ನಂತರ ಘಟನೆ ಬೆಳಕಿಗೆ ಬಂದಿತ್ತು.
Advertisement