
ಬೆಂಗಳೂರು: ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದ ಬೆನ್ನಲ್ಲೇ ಕನ್ನಡ ಚಿತ್ರೋದ್ಯಮದಲ್ಲೂ ಅಂತಹ ಒಂದು ಸಮಿತಿ ರಚನೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದ್ದು, ನಟಿಯರಿಗೆ ಲೈಂಗಿಕ ಕಿರುಕುಳದ ವಿರುದ್ಧ ಸಮಿತಿ ರಚಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಸೋಮವಾರ ಕನ್ನಡ ಚಲನಚಿತ್ರ ಮಂಡಳಿಗೆ ಸೂಚಿಸಿದೆ.
ಇಂದು ಈ ಸಂಬಂಧ ರಾಕ್ಲೈನ್ ವೆಂಕಟೇಶ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್‌ಸಿಸಿ) ನಿರ್ದೇಶಕ ಎನ್‌ಎಂ ಸುರೇಶ್ ಮತ್ತು ಚಿತ್ರ ನಿರ್ಮಾಪಕಿ ಕವಿತಾ ಲಂಕೇಶ್ ಅವರು, ಮಹಿಳಾ ಆಯೋಗದ ನಿರ್ದೇಶನವನ್ನು ಚೇಂಬರ್‌ಗೆ ತಿಳಿಸಿದರು.
ಕೆಲವು ದಿನಗಳ ಹಿಂದೆ ರಾಜ್ಯ ಮಹಿಳಾ ಆಯೋಗದ ನಿರ್ದೇಶನದಂತೆ ಮಹಿಳಾ ಕಲಾವಿದರೊಂದಿಗೆ ಕೆಎಫ್‌ಸಿಸಿ ಕರೆದ ಸಭೆಯಲ್ಲಿ, POSH(ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ) ಸಮಿತಿ ರಚಿಸುವ ಬಗ್ಗೆ ಮತ್ತು ಅದಕ್ಕೆ ಕ್ರಿಯಾ ಯೋಜನೆ ರೂಪಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.
"ಚಿತ್ರರಂಗದಲ್ಲಿ ಮಹಿಳೆಯರಿಗೆ ನ್ಯಾಯಕ್ಕಾಗಿ ಹೋರಾಟದಲ್ಲಿ ಇದು ಒಂದು ಸಣ್ಣ ಹೆಜ್ಜೆಯಾಗಿದೆ" ಎಂದು ಕವಿತಾ ಲಂಕೇಶ್ ಅವರು ಹೇಳಿದ್ದಾರೆ.
POSH ಸಮಿತಿ ರಚಿಸುವ ಬಗ್ಗೆ ಮತ್ತು ಹೇಮಾ ಸಮಿತಿಯಂತಹ ಸಮಿತಿಯನ್ನು ರಚಿಸುವ ಬೇಡಿಕೆಯನ್ನು ಸಂಸ್ಥೆ ಪರಿಶೀಲಿಸುತ್ತದೆ ಎಂದು ಎನ್ಎಂ ಸುರೇಶ್ ಅವರು ಹೇಳಿದ್ದಾರೆ.
ಸಭೆಯಲ್ಲಿ, ಮಹಿಳಾ ಆಯೋಗವು ಉದ್ಯಮದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ಮತ್ತು ಇತರ ಶೋಷಣೆಗಳನ್ನು ನಿಭಾಯಿಸಲು 17 ಅಂಶಗಳ ಕಾರ್ಯಸೂಚಿಯನ್ನು ಪ್ರಸ್ತುತಪಡಿಸಿದೆ.
"ಒಮ್ಮೆ ಅವರು ಈ 17 ಬೇಡಿಕೆಗಳನ್ನು ಪತ್ರವಾಗಿ ಕಳುಹಿಸಿದರೆ, ನಾವು ನಮ್ಮ ನಡುವೆ ಸಭೆ ಕರೆದು ಚರ್ಚಿಸುತ್ತೇವೆ. ವಿಷಯವೆಂದರೆ, ಕನ್ನಡ ಚಿತ್ರರಂಗದ ಯಾವುದೇ ಮಹಿಳೆ ಇದುವರೆಗೆ ನಮಗೆ ಯಾರ ವಿರುದ್ಧವೂ ಔಪಚಾರಿಕವಾಗಿ ದೂರು ನೀಡಲು ಮುಂದೆ ಬಂದಿಲ್ಲ ಎಂದು ಸುರೇಶ್ ತಿಳಿಸಿದರು.
ಇನ್ನು ಸಭೆಯ ನಂತರ ಸುದ್ದಿರಾರರೊಂದಿಗೆ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು, ಆಯೋಗದಿಂದ ಸರ್ವೇ ಮಾಡುತ್ತೇವೆ. ಅಲ್ಲಿ ಬಂದ ಸಮಸ್ಯೆಗಳನ್ನು ಚರ್ಚೆ ಮಾಡಿ ಬಗೆಹರಿಸುವಂಥ ಕೆಲಸಗಳು ಆಗಲಿವೆ. ವಾಣಿಜ್ಯ ಮಂಡಳಿ ಸಮಯಾವಕಾಶ ಕೇಳಿದೆ, ಕೊಡೋಣ. ಹೇಮಾ ಕಮಿಟಿ ರೀತಿಯ ಸಮಿತಿ ಬದಲು ಪಾಶ್ ಕಮಿಟಿ ರಚನೆ ಮಾಡುವಂತೆ ಚರ್ಚೆ ಆಗಿದೆ. ಕನ್ನಡ ಚಿತ್ರರಂಗಕ್ಕೆ ಪಾಶ್ ಕಮಿಟಿ ಮಾಡಿ ಅಂತಾ ಹೇಳಿದ್ದೀನಿ. ಸರ್ಕಾರದ ಗೆಜೆಟ್ನಲ್ಲಿ ಈ ಕಮಿಟಿ ಇರುತ್ತದೆ. ದೂರು ಬಂದ್ರೆ, ಅದಕ್ಕೆ ತಕ್ಕ ಶಿಕ್ಷೆ ಇರುತ್ತದೆ. 15 ದಿನಗಳೊಳಗೆ ತಿಳಿಸುತ್ತೇವೆಂದು ಫಿಲ್ಮ್ ಚೇಂಬರ್ ತಿಳಿಸಿದೆ ಎಂದರು.
Advertisement