
ನಟ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಸೀಸನ್ 11, ಸೆಪ್ಟೆಂಬರ್ 29 ರಂದು ಆರಂಭವಾಗುತ್ತಿದ್ದು, ಇದೇ ಮೊದಲ ಬಾರಿಗೆ ಶೋ ಆರಂಭಕ್ಕು ಮುನ್ನವೇ ಕಂಟೆಸ್ಟೆಂಟ್ಗಳ ಹೆಸರನ್ನು ಬಹಿರಂಗ ಮಾಡಲು ‘ಕಲರ್ಸ್ ಕನ್ನಡ’ ವಾಹಿನಿ ನಿರ್ಧರಿಸಿದೆ.
ಈ ಕುರಿತು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಲರ್ಸ್ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಪ್ರಶಾಂತ್ ನಾಯಕ್ ಅವರು, ಲಾಂಚ್ಗಿಂತಲೂ ಮೊದಲೇ ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸಲು ನಾವು ನಿರ್ಧರಿಸಿದ್ದೇವೆ ಎಂದು ಕಿಚ್ಚ ಸುದೀಪ್ ಅವರ ಸಮ್ಮುಖದಲ್ಲೇ ಹೇಳಿದರು.
ಈ ಬಾರಿ ಸ್ವರ್ಗ ಮತ್ತು ನರಕದ ಥೀಮ್ ಇರಲಿದೆ. ರಾಜಾ ರಾಣಿ ಶೋ ಫಿನಾಲೆಯಲ್ಲಿ ಬಿಗ್ ಬಾಸ್ನ ಕೆಲವು ಸ್ಪರ್ಧಿಗಳ ಹೆಸರು ರಿವೀಲ್ ಮಾಡುತ್ತೇವೆ. ಇದು ಈ ಬಾರಿಯ ಹೊಸತನ. ಆ ಸ್ಪರ್ಧಿಗಳು ಸ್ವರ್ಗಕ್ಕೆ ಹೋಗಬೇಕೋ ಅಥವಾ ನರಕಕ್ಕೆ ಹೋಗಬೇಕೋ ಎಂಬುದನ್ನು ನಿರ್ಧರಿಸಲು ವೀಕ್ಷಕರು ಓಟ್ ಮಾಡಬಹುದು ಎಂದು ಪ್ರಶಾಂತ್ ನಾಯಕ್ ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಸುದೀಪ್, ಈ ಬಾರಿ ಸ್ವರ್ಗ ನರಕದ ಕಥೆ ಬಿಗ್ ಬಾಸ್‌ನಲ್ಲಿದೆ. ನಾವು ತಂಡ ಮಾಡದೇ ಇದ್ದರೂ ಅವರು ಒಳಗಡೆ ಹೋದ ನಂತರ ತಮ್ಮ ತಂಡ ಮಾಡಿಕೊಳ್ಳುತ್ತಾರೆ. ಹೀಗಾಗಿ ಈ ಬಾರಿ ನಾವೇ ಸ್ವರ್ಗ ಮತ್ತು ನರಕ ಎಂದು ಎರಡು ತಂಡ ಮಾಡಿ ಅವರನ್ನು ಮನೆಯೊಳಗೆ ಕಳುಹಿಸುತ್ತಿದ್ದೇವೆ ಎಂದರು.
ಬಿಗ್ ಬಾಸ್ 10 ಸೀಸನ್ ಆಗಿದೆ. ಹೀಗಾಗಿ ಒಂದು ಬ್ರೇಕ್ ತೆಗೆದುಕೊಳ್ಳೊಣ ಎಂದುಕೊಂಡಿದ್ದೇ. ಹಾಗಂಥ ನಮ್ಮ ಮಧ್ಯೆ ಯಾವುದೇ ಮನಸ್ತಾಪ ಇರಲಿಲ್ಲ, ಬಿಗ್ ಬಾಸ್ ಬದಲು ಸಿನಿಮಾ ಕಡೆ ಹೆಚ್ಚು ಗಮನ ಕೊಡಬೇಕೆನ್ನುವ ಉದ್ದೇಶ ನನಗೆ ಇತ್ತು, ಆದರೆ ಹಾಗೂ ಹೀಗೂ ಕೊನೆಗೂ ಬಿಗ್ ಬಾಸ್ ತಂಡ ನನ್ನ ಮನಸು ಬದಲಿಸುವಲ್ಲಿ ಯಶಸ್ವಿಯಾದರು ಎಂದು ಸುದೀಪ್ ಹೇಳಿದ್ದಾರೆ.
ಬಿಗ್ ಬಾಸ್ ಶುರುವಾದರೆ ನನ್ನ ಬದುಕು ನಿಂತಂತೆ ಆಗುತ್ತೆ, ನಾಲ್ಕು ದಿನ ಹೊರಗೆ ಹೋಗಬಹುದಷ್ಟೇ ಆ ನಂತರ ಎಲ್ಲೇ ಇದ್ದರೂ ಶುಕ್ರವಾರ ಬರಬೇಕಾಗುತ್ತೆ, ಹೀಗಾಗಿ ಹತ್ತು ವರ್ಷ ಆಯ್ತು ಬೇರೆಯವರು ಮಾಡಲಿ ಅಂತ ಯೋಚನೆ ಮಾಡಿದ್ದೆ. ಆದರೆ ಅದು ಆಗಲಿಲ್ಲ ಎಂದಿದ್ದಾರೆ.
ಬಿಗ್ ಬಾಸ್ ಇತಿಹಾಸದಲ್ಲಿ ಸುದೀಪ್ ಹೊಸ ದಾಖಲೆ!
ಕನ್ನಡದ ಬಿಗ್ ಬಾಸ್ ಸ್ಪೆಷಲ್ ಆಗಿದೆ. ಈ ಒಂದು ಶೋ ಸ್ಪೆಷಲ್ ಆಗಿಯೇ ಕಾಣಿಸುತ್ತಿದೆ. ಇದಕ್ಕೂ ಹೆಚ್ಚಾಗಿ ಈ ಒಂದು ಶೋವನ್ನು ಸುದೀಪ್ ಕಳೆದ 10 ವರ್ಷದಿಂದ ನಡೆಸಿಕೊಂಡಿದ್ದಾರೆ. ಇದೀಗ 11ನೇ ವರ್ಷಕ್ಕೂ ಕಾಲಿಟ್ಟಿದ್ದಾರೆ. ಈ ಮೂಲಕ ಒಂದು ರೀತಿ ದಾಖಲೆ ಮಾಡಿದ್ದಾರೆ.
Advertisement