
ಬೆಂಗಳೂರು: ನಟ ದರ್ಶನ್, ಆಶ್ರಮದ ಪಾಲಾಗಿದ್ದ ಹಿರಿಯ ನಟ ಸುದರ್ಶನ್ ಪತ್ನಿ ಶೈಲಶ್ರೀ ಅವರ ನೆರವಿಗೆ ನಿಂತಿದ್ದು, ಯಾರೂ ಇಲ್ಲದೇ ಆಶ್ರಮ ಪಾಲಾಗಿದ್ದ ಅವರ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನಾಳಿದ ಕಲಾವಿದರ ಕುಟುಂಬದ ಕುಡಿಯೊಂದು ನೆಲೆ ಬೆಲೆಯಿಲ್ಲದೇ ಇದೇ ಬೆಂಗಳೂರಿನ ಆಶ್ರಮಕ್ಕೆ ಸೇರಿಕೊಂಡು ಆಶ್ರಯ ಪಡೆದಿರುವ ದುರಂತ ಸುದ್ದಿಯೊಂದರ ಹಿಂದೆ ಬಿದ್ದಿದ್ದೇನೆ.
ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಆರ್.ಎನ್. ನಾಗೇಂದ್ರರಾಯರ ಮುದ್ದಿನ ಸೊಸೆ ಇಲ್ಲೇ ಈ ಕಾಂಕ್ರೀಟ್ ಕಾಡಿನ ನಡುವೆ ಕಳೆದು ಹೋಗಿದ್ದಾರೆ. ಸುದರ್ಶನ್ ಅವರ ಸಾವಿನ ನಂತರ ದಿಕ್ಕಿಲ್ಲದ ಪರದೇಶಿಯಾಗಿ ಏಕಾಂಗಿ ಬದುಕು ಕಂಡುಕೊಂಡಿದ್ದ ಶೈಲಶ್ರೀ ಮೇಡಂ ಸೈಲೆಂಟ್ ಆಗಿ ಆಶ್ರಮ ಸೇರಿಕೊಂಡಿರುವ ಹೃದಯ ವಿದ್ರಾವಕ ಸುದ್ದಿಯೊಂದು ಬಂದಿದೆ.
ಈ ಮೊದಲು ಅಪಾರ್ಟ್ಮೆಂಟ್ ಒಂದರಲ್ಲಿ ಶೈಲಶ್ರೀ ಅವರು ವಾಸವಿದ್ದರು. ಆದರೆ, ಅದರ ಮಾಲೀಕರು ಬಿಲ್ಡಿಂಗ್ ನೆಲಸಮ ಮಾಡಿದ್ದರಿಂದ ಶೈಲಶ್ರೀ ಅವರು ಬೇರೆ ನೆಲೆ ಕಂಡುಕೊಳ್ಳಬೇಕಿತ್ತು. ಆಗ ಹಿರಿಯ ನಟಿಯೊಬ್ಬರು ಶೈಲಶ್ರೀ ಸಹಾಯಕ್ಕೆ ಬಂದರು. ಅವರ ಸಲಹೆಯಂತೆ ಆಶ್ರಮ ಸೇರಿದರು. ಆರಂಭದಲ್ಲಿ ಖರ್ಚು ವೆಚ್ಚಗಳನ್ನು ಹಿರಿಯ ನಟಿ ನೋಡಿಕೊಳ್ಳುತ್ತಿದ್ದರು. ಆದರೆ, ತಿಂಗಳುಗಳು ಉರುಳಿದಂತೆ ಇದು ಸಾಧ್ಯವಾಗಿಲ್ಲ. ಆಗ ಸಹಾಯಕ್ಕೆ ಬಂದಿದ್ದು ದರ್ಶನ್. ಶೈಲಶ್ರೀ ಅವರ ಕೊನೆಗಾಲದವರೆಗೂ ಸಹಾಯ ಮಾಡಲು ದರ್ಶನ್ ಒಪ್ಪಿ ಮುಂದೆ ಬಂದಿದ್ದಾರೆ ಎಂದು ಬರೆದುಕೊಂಡಿದ್ದಾರೆ.
Advertisement