
ಕೆಜಿಎಫ್, ಸಾಲಾರ್, ಭೈರತಿ ರಣಗಲ್ ಮತ್ತು ಉಗ್ರಂ ನಂತಹ ಚಿತ್ರಗಳಿಗೆ ಸಂಗೀತ ಸಂಯೋಜಿಸುವ ಮೂಲಕ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ರವಿ ಬಸ್ರೂರು ಅವರು ಈಗ ಕರಾವಳಿ ಕರ್ನಾಟಕದ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಆಧಾರಿತ 'ವೀರ ಚಂದ್ರಹಾಸ' ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಇತ್ತೀಚೆಗೆ ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಈ ಮಹತ್ವಾಕಾಂಕ್ಷೆಯ ಚಿತ್ರದ ಟ್ರೇಲರ್ ಬಿಡುಗಡೆ ಮತ್ತು ಯಕ್ಷಗಾನ ಕಲಾವಿದರನ್ನು ಗೌರವಿಸುವ ಸಮಾರಂಭ ನಡೆಯಿತು.
"ಈ ಚಿತ್ರವು ಹಲವು ವರ್ಷಗಳ ನನ್ನ ಕನಸಾಗಿದೆ. ಇದು ಒಂದು ಸಾಂಸ್ಕೃತಿಕ ಆಂದೋಲನ" ಎಂದು ರವಿ ಬಸ್ರೂರು ಅವರು ಯಕ್ಷಗಾನ ಕಲಾವಿದರು ಮತ್ತು ಬೆಂಬಲಿಗರ ನಡುವೆ ನಿಂತು ಹೇಳಿದರು.
"ಯಕ್ಷಗಾನದ ಮಹಿಮೆಯನ್ನು ನಾನು ಜಗತ್ತಿಗೆ ಹೇಳಲು ಬಯಸಿದ್ದೇನೆ. ಇದು ಕೇವಲ ಕಲಾ ಪ್ರಕಾರವಾಗಿ ಉಳಿದಿಲ್ಲ. ಇದು ಜೀವನ ವಿಧಾನವಾಗಿ. ಇದು ಕೇವಲ ಶಕ್ತಿಯಿಂದ ಮಾಡಿದ ಚಿತ್ರವಲ್ಲ; ಇದನ್ನು ಭಕ್ತಿಯಿಂದ ಮಾಡಿದ" ಸಿನಿಮಾ ಎಂದು ಹೇಳಿದರು.
ಹೊಂಬಾಳೆ ಫಿಲ್ಮ್ಸ್ ಅರ್ಪಿಸುತ್ತಿರುವ ಮತ್ತು ಎನ್.ಎಸ್. ರಾಜ್‌ಕುಮಾರ್ ನಿರ್ಮಾಣದ ವೀರ ಚಂದ್ರಹಾಸ ಚಿತ್ರವು ಜೈಮಿನಿ ಭಾರತ ಸಂಪ್ರದಾಯದಲ್ಲಿ ಬೇರೂರಿರುವ ಯಕ್ಷಗಾನ ಪ್ರಸಂಗವನ್ನು ಆಧರಿಸಿದೆ. ಚಿತ್ರರಂಗದ ಇತಿಹಾಸದಲ್ಲೇ ಮೊದಲ ಮುಖ್ಯವಾಹಿನಿಯ ಸಿನಿಮಾದಲ್ಲಿ ಯಕ್ಷಗಾನವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇದರಲ್ಲಿ 400ಕ್ಕೂ ಹೆಚ್ಚು ನಿಜವಾದ ಯಕ್ಷಗಾನ ಕಲಾವಿದರು ಬೆಳ್ಳಿ ಪರದೆಯ ಮೇಲೆ ಪ್ರದರ್ಶನ ನೀಡಿದ್ದಾರೆ. ಶತಮಾನಗಳಷ್ಟು ಹಳೆಯದಾದ ಕಥೆ ಹೇಳುವ ಸಂಪ್ರದಾಯಿಕ ಶಕ್ತಿ, ಬಣ್ಣಗಳು ಮತ್ತು ಭಾವನೆಗಳನ್ನು ಸೆರೆಹಿಡಿದಿದ್ದಾರೆ ಎಂದರು.
ಹಿನ್ನೆಲೆ ಸಂಗೀತಕ್ಕಾಗಿ 600 ರಿಂದ 700 ಸಂಗೀತ ಟ್ರ್ಯಾಕ್‌ಗಳನ್ನು ಬಳಸಿದ್ದೇವೆ. ವಿಶೇಷವಾಗಿ ಸಿನಿಮಾದಲ್ಲಿ ಸೆಟ್ ಲೈಟ್ ಬಳಸದೆ, ನೈಜ ಬೆಳಕಲ್ಲೇ ಶೂಟ್ ಮಾಡಿದ್ದೇವೆ. 8 ರಿಂದ 10 ಕೋಟಿ ಬಜೆಟ್‌ನಲ್ಲಿ ಹೆಬ್ಬಾಳದ ಬಳಿ ಒಂದು ಗ್ರೌಂಡ್‌ನಲ್ಲಿ ಬೇರೆ ಬೇರೆ ಸೆಟ್ ಹಾಕಿ 35 ರಿಂದ 40 ದಿನ ಶೂಟ್ ಮಾಡಿದ್ದೇವೆ'' ಎಂದು ರವಿ ಬಸ್ರೂರು ತಿಳಿಸಿದ್ದಾರೆ.
"ನಾವು ಕೃತಕ ಸೆಟ್ ದೀಪಗಳನ್ನು ಬಳಿಸಿಲ್. "ಕಲೆಯ ಚೈತನ್ಯವನ್ನು ಉಳಿಸಿಕೊಳ್ಳಲು ಸಂಪೂರ್ಣ ಚಿತ್ರೀಕರಣವನ್ನು ನೈಸರ್ಗಿಕ ಬೆಳಕಿನಲ್ಲಿ ಮಾಡಲಾಯಿತು ಎಂದರು.
ಚಂದ್ರಹಾಸನ ಪಾತ್ರದಲ್ಲಿ ಅಭಿನಯಿಸಿರುವ ನಟ ಶಿಥಿಲ್ ಶೆಟ್ಟಿ ಈ ಸಿನಿಮಾ ತಮ್ಮ ಜೀವನವನ್ನು ಬದಲಾಯಿಸುವ ಸಿನಿಮಾ ಎಂದು ಹೇಳಿದರು. "ಒಂದು ಕಾಲದಲ್ಲಿ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ಯಕ್ಷಗಾನ, ಈಗ ಜಾಗತಿಕ ಮಟ್ಟಕ್ಕೆ ತಲುಪಲು ಸಿದ್ಧವಾಗಿದೆ" ಎಂದು ಅವರು ತಿಳಿಸಿದರು.
"ರವಿ ಬಸ್ರೂರ್ ನಿಜವಾದ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡಿದ್ದಾರೆ. ಎಲ್ಲಿಯೂ ಲೋಪವಾಗದ ಹಾಗೆ ಸಿನಿಮಾ ನಿರ್ದೇಶಿಸಿದ್ದಾರೆ. ಅವರು ಸ್ಥಳದಲ್ಲೇ ಸನ್ನಿವೇಶವನ್ನು ವಿವರಿಸುತ್ತಿದ್ದರು. ಸಿನಿಮಾಗಾಗಿ ಅವರ ಡೆಡಿಕೇಶನ್ ದೊಡ್ಡದು. ನಾವೆಲ್ಲ ಕುದುರೆ ಸವಾರಿ ಕಲಿತು ಅಭಿನಯಿಸಿದ್ದೇವೆ. ಯಕ್ಷಗಾನ ವಿಶ್ವಗಾನ ಆಗಬೇಕು ಎಂದು ಹೇಳ್ತಾರಷ್ಟೇ. ಆದರೆ ಅದನ್ನು ರವಿ ಬಸ್ರೂರು ಕಾರ್ಯಗತ ಮಾಡಿ ತೋರಿಸಿದ್ದಾರೆ'' ಎಂದರು
ದುಷ್ಟಬುದ್ಧಿಯ ಪಾತ್ರದಲ್ಲಿ ಅಭಿನಯಿಸಿರುವ ಪ್ರಸನ್ನ ಶೆಟ್ಟಿಗಾರ್ ಮಾತನಾಡಿ, "ರವಿ ಬಸ್ರೂರ್ ಈ ಚಿತ್ರದ ಮೂಲಕ 12 ವರ್ಷಗಳ ಕನಸನ್ನು ನನಸಾಗಿಸಿದ್ದಾರೆ. ದುಷ್ಟಬುದ್ದಿ ಪಾತ್ರ ಮಾಡಿ ಖ್ಯಾತರಾದವರನ್ನು ಬಿಟ್ಟು ನನ್ನ ಕೈಲಿ ಅದನ್ನು ಮಾಡಿಸಿದ್ದಾರೆ. ಅವರಲ್ಲಿ ಬೆಳಗ್ಗೆ ಇರೋ ಉತ್ಸಾಹವೇ ಸಂಜೆ 6 ಗಂಟೆಗೂ ಇರುತ್ತಿತ್ತು. ಇದು ಯಕ್ಷಗಾನಕ್ಕೆ ಸಿಕ್ಕಂಥ ದೊಡ್ಡ ಬೆಳವಣಿಗೆ'' ಎಂದರು.
ಇನ್ನು ಬರಹಗಾರ ಪ್ರಮೋದ್ ಮೊಗಬೆಟ್ಟ ಚಿತ್ರದ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿದರು: "ನಾನು ಈ ಒಂದು ಚಿತ್ರಕ್ಕಾಗಿ ಸುಮಾರು 60 ರಿಂದ 70 ಹಾಡುಗಳನ್ನು ಬರೆದಿದ್ದೇನೆ" ಎಂದು ಹೇಳಿದರು. ಬೆಳ್ಳಿತೆರೆಯಲ್ಲಿ ಇಂಥಹ ಅದ್ಭುತ ಬೆಳವಣಿಗೆ ಆಗುತ್ತೆ ಅಂತ ನಾವ್ಯಾರೂ ಊಹಿಸಿರಲಿಲ್ಲ. ಅದನ್ನು ನಮ್ಮವರೇ ಆದ ರವಿ ಬಸ್ರೂರ್ ಮಾಡಿರುವುದು ಹೆಮ್ಮೆಯ ವಿಚಾರ ಎಂದರು.
ವಿಶೇಷ ಹೈಲೈಟ್‌ನಲ್ಲಿ, ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ಅಭನಿಯಿಸಿದ್ದಾರೆ. ವೀರಕಾಳಗದ ವಿಜೇತರಿಗೆ ಪ್ರಶಸ್ತಿ ನೀಡುವ, ವಿಶ್ಯುಯಲಿ ಟ್ರೀಟ್ ಕೊಡುವಂಥ ಪಾತ್ರ ಅವರದ್ದು. ಅನಾರೋಗ್ಯವಿದ್ದರೂ, ಹೇಳಿದ ಸಮಯಕ್ಕೆ ಸರಿಯಾಗಿ ಬಂದು ಶಿವಣ್ಣ ಚಿತ್ರೀಕರಣ ಮುಗಿಸಿಕೊಟ್ಟರು. ಹೆಬ್ಬಾಳದ ಸೆಟ್‌ನಲ್ಲಿ ನಮ್ಮ ಜತೆ ಸಂಜೆವರೆಗೂ ಇದ್ದರು ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಈ ಚಿತ್ರ ಏಪ್ರಿಲ್ 18 ರಂದು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದ್ದು, ವೀರ ಚಂದ್ರಹಾಸ ಸಾಂಸ್ಕೃತಿಕ ಚಳುವಳಿಯಾಗಿ ರೂಪುಗೊಳ್ಳುತ್ತಿದೆ ಎಂದು ರವಿ ಬಸ್ರೂರ್ ಹೇಳಿದ್ದಾರೆ.
Advertisement