ನಟ ಯಶ್ ತಾಯಿ ಚೊಚ್ಚಲ ನಿರ್ಮಾಣದ 'ಕೊತ್ತಲವಾಡಿ' ಚಿತ್ರದ ಫಸ್ಟ್ ಲುಕ್ ರಿವೀಲ್
ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ. ಪುಷ್ಪ ಹೊಸದೊಂದು ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಅದಕ್ಕೆ PA Productions ಎಂದು ಹೆಸರಿಟ್ಟಿದ್ದಾರೆ.
P ಅಂದ್ರೆ ಪುಷ್ಪ A ಅಂದ್ರೆ ಅರುಣ್ ಕುಮಾರ್ ಎಂದರ್ಥ. ಯಶ್ ಅಪ್ಪ ಮತ್ತು ಅಮ್ಮನ ಹೆಸರು ಇರೋ ಈ ಪ್ರೊಡಕ್ಷನ್ ಹೌಸ್ ಮೂಲಕ ಚೊಚ್ಚಲ ಚಿತ್ರ ನಿರ್ಮಾಣವಾಗುತ್ತಿದೆ. ಅಕ್ಷಯ ತೃತೀಯ ದಿನವಾದ ಇಂದು (ಏ.30) ಚಿತ್ರತಂಡ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡಿದೆ.
PA Productions ಮೊದಲ ಪ್ರಯತ್ನಕ್ಕೆ ‘ಕೊತ್ತಲವಾಡಿ’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ಶ್ರೀರಾಜ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಹಿರಿಯ ನಿರ್ದೇಶಕರಾದ ಕೆವಿ ರಾಜು, ರವಿ ಶ್ರೀವತ್ಸ ಗರಡಿಯಲ್ಲಿ ಕೆಲಸ ಮಾಡಿರುವ ಶ್ರೀರಾಜ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೆಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.
ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿದ್ದು, ಕಿರುತೆರೆ ನಟಿ ಕಾವ್ಯಾ ಶೈವ ನಾಯಕಿಯಾಗಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಅವರಂತಹ ಅನುಭವಿ ತಾರಾಬಳಗ ಚಿತ್ರದಲ್ಲಿದೆ. ನಾನೂ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು, ಏನಾದರು ಕೆಲಸ ಮಾಡಬೇಕು ಅಂತ ಬಂದಿದ್ದೇನೆ. ತುಂಬಾ ದುಡ್ಡಿದೆ ಅಂತ ನಿರ್ಮಾಪಕಿ ಆಗಿಲ್ಲ. ನಿರ್ಮಾಪಕಿ ಆಗಬೇಕು ಎಂಬುದು ಬಹಳ ವರ್ಷಗಳ ಕನಸು. ಮಕ್ಕಳು ದೊಡ್ಡವರಾಗಿ ಸೆಟಲ್ ಆಗಲಿ ಅಂತ ಕಾಯುತ್ತಿದ್ದೆ. ಈಗ ಕಾಲ ಕೂಡಿ ಬಂದಿದೆ ಎಂದು ಪುಷ್ಪ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ