
ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾದ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ನಟ ಅಜಯ್ ರಾವ್ ವಿರುದ್ಧ ಪತ್ನಿ ಸಪ್ನಾ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ಸಹ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.
ಅಜಯ್ ರಾವ್ ಹಾಗೂ ಸಪ್ನಾ ಅವರುಗಳು ಪ್ರೀತಿಸಿ ಮದುವೆ ಆಗಿದ್ದರು. 2014 ರ ಡಿಸೆಂಬರ್ 18 ರಂದು ಹೊಸಪೇಟೆಯಲ್ಲಿ ಆಪ್ತರು, ಸಂಬಂಧಿಕರ ಎದುರು ಸರಳವಾಗಿ ಈ ಜೋಡಿಯ ವಿವಾಹ ನಡೆದಿತ್ತು. ಈ ದಂಪತಿಗೆ ಚರಿಷ್ಮಾ ಹೆಸರಿನ ಮಗಳಿದ್ದಾಳೆ. 2019 ರಲ್ಲಿ ಮಗಳ ಜನನ ಆಗಿತ್ತು.
ಇದೀಗ ಅಜಯ್ ರಾವ್ ಪತ್ನಿ ಸಪ್ನಾ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅಜಯ್ ರಾವ್ ವಿರುದ್ಧ ದೂರು ದಾಖಲಿಸಿದ್ದಾರೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 12ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಮದುವೆಯಾದ ನಂತರ ಅಜಯ್ ರಾವ್ ಶ್ರೀ ಕೃಷ್ಣ ಆರ್ಟ್ ಅಂಡ್ ಕ್ರಿಯೇಷನ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದರು.
ಪತ್ನಿ ಸ್ವಪ್ನಾ ಅವರು ಸಿನಿಮಾ ನಿರ್ಮಾಣಕ್ಕೆ ಇಳಿಯಬೇಡಿ ಎಂದು ಪದೇ ಪದೇ ಗಂಡನಿಗೆ ಎಚ್ಚರಿಸುತ್ತಿದ್ದರು. ಹೀಗಿದ್ದರೂ ಕೃಷ್ಣಲೀಲಾ, ಯುದ್ಧಕಾಂಡ ಸೇರಿದಂತೆ ಹಲವು ಚಿತ್ರಗಳನ್ನು ಅಜಯ್ ರಾವ್ ನಿರ್ಮಾಣ ಮಾಡಿದ್ದರು.
ಯುದ್ಧಕಾಂಡ ಸಿನಿಮಾಗಾಗಿ ಅಜಯ್ ರಾವ್ ಭಾರೀ ಸಾಲ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ಯುದ್ಧಕಾಂಡ ಚಿತ್ರಕ್ಕಾಗಿ ನೆಚ್ಚಿನ ದುಬಾರಿ ಕಾರನ್ನೂ ಮಾರಾಟ ಮಾಡಿದ್ದರು. ಯುದ್ಧಕಾಂಡ ಬಿಡುಗಡೆಯ ನಂತವೂ ಕೌಟುಂಬದಲ್ಲಿ ಪದೇ ಪದೇ ಕಲಹ ನಡೆಯುತ್ತಿತ್ತು. ವಿಪರೀತ ಸಾಲ ಮಾಡಿಕೊಂಡಿದ್ದೇ ದಾಂಪತ್ಯದಲ್ಲಿ ಬಿರುಕಿಗೆ ಕಾರಣ ಎನ್ನಲಾಗುತ್ತಿದೆ.
2003 ರಲ್ಲಿ ಬಿಡುಗಡೆ ಆದ ‘ಎಕ್ಸ್ಕ್ಯೂಸ್ ಮಿ’ ಸಿನಿಮಾ ಮೂಲಕ ಅಜಯ್ ರಾವ್ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಅದಕ್ಕೆ ಮುನ್ನ ಸುದೀಪ್ ನಟನೆಯ ‘ಕಿಚ್ಚ’ ಸಿನಿಮಾನಲ್ಲಿ ಸುದೀಪ್ ಗೆಳೆಯನ ಪಾತ್ರದಲ್ಲಿ ನಟಿಸಿದ್ದರು.
‘ತಾಜ್ ಮಹಲ್’, ‘ಪ್ರೇಮ್ ಕಹಾನಿ’, ‘ಕೃಷ್ಣನ್ ಲವ್ ಸ್ಟೋರಿ’, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’, ‘ಕೃಷ್ಣ-ಲೀಲಾ’ ಇನ್ನೂ ಹಲವು ಹಿಟ್ ಸಿನಿಮಾಗಳಲ್ಲಿ ಅಜಯ್ ನಟಿಸಿದ್ದಾರೆ. ಇದೇ ವರ್ಷ ಬಿಡುಗಡೆ ಆದ ‘ಯುದ್ಧಕಾಂಡ 2 ಸಿನಿಮಾನಲ್ಲಿ ನಟಿಸುವ ಜೊತೆಗೆ ನಿರ್ಮಾಣವನ್ನೂ ಸಹ ಅಜಯ್ ರಾವ್ ಮಾಡಿದ್ದರು.
Advertisement