
ಬಹುಭಾಷಾ ನಟಿ ಡೈಸಿ ಶಾ ಕನ್ನಡ ಚಿತ್ರರಂಗದ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರಜ್ವಲ್ ದೇವರಾಜ್ ನಟನೆಯ ಭದ್ರ ಚಿತ್ರದ ಮೂಲಕ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಡೈಸಿ ಶಾ, ಬಳಿಕ ಜಗ್ಗೇಶ್ ಅಭಿನಯದ ಬಾಡಿಗಾರ್ಡ್ ಚಿತ್ರದಲ್ಲಿ ನಟಿಸಿದ್ದರು. ತದನಂತರ ಸಲ್ಮಾನ್ ಖಾನ್ ಅವರ 'ಜೈ ಹೋ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿ ಸಾಕಷ್ಟು ಜನಪ್ರಿಯತೆ ಕೂಡಾ ಪಡೆದಿದ್ದಾರೆ.
ದಕ್ಷಿಣ ಭಾರತದ ಚಿತ್ರರಂಗ ಹಾಗೂ ಕನ್ನಡ ಸಿನಿಮಾಗಳಲ್ಲಿ ನಾಯಕಿಯನ್ನ ಹೇಗೆ ತೋರಿಸಲಾಗುತ್ತದೆ ಎಂಬುದರ ಕುರಿತು ಅವರು ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ.
ಹಾಟರ್‌ಫ್ಲೈ ಯೂಟ್ಯೂಬ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಡೈಸಿ ಶಾ, ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾಗ ಆದ ಅನುಭವವೊಂದನ್ನು ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾಗ, ಪುರುಷ ನಟರಿಗೆ ಸರಿಯಾದ ಹಿನ್ನೆಲೆ ಮತ್ತು ಉಪ ಪಠ್ಯದೊಂದಿಗೆ ನಿರ್ದೇಶನ ನೀಡಲಾಗುತ್ತಿತ್ತು. ಆದರೆ ನಾಯಕಿಯರಾದ ನಮಗೆ ಇಲ್ಲಿ ನಗಬೇಕು, ಇಲ್ಲಿ ಅಳಬೇಕು, ಇಲ್ಲಿ ಹೀಗಿರಬೇಕು ಎಂದಷ್ಟೇ ಹೇಳಲಾಗುತ್ತಿತ್ತು. ಭಾಷೆಯಲ್ಲಿ ಚೆನ್ನಾಗಿ ಪರಿಣತಿ ಇಲ್ಲದಿರುವುದು ಇದಕ್ಕೆ ಕಾರಣ ಇರಬಹುದು ಎಂದಿದ್ದಾರೆ.
ನಾನು ಕನ್ನಡ ಸಿನಿಮಾ ಮಾಡುವಾಗ, ನನ್ನ ಬಿಡುವಿನ ದಿನಗಳಲ್ಲಿ ಟಿವಿ ನೋಡುತ್ತಿದ್ದೆ ಮತ್ತು ನಾನು ನೋಡಿದ ಎಲ್ಲಾ ಕನ್ನಡ ಹಾಡುಗಳಲ್ಲಿ ಒಬ್ಬರು ನಟ ಇದ್ದರು. ಅವರ ಎಲ್ಲಾ ಹಾಡುಗಳಲ್ಲಿ, ನಾಯಕಿಯ ಹೊಕ್ಕಳಿನ ಮೇಲೆ ಫ್ರೂಟ್ ಸಲಾಡ್ ಅಥವಾ ತರಕಾರಿ ಸಲಾಡ್ ಅನ್ನು ಹಾಕಿ, ಕ್ಲೋಸ್-ಅಪ್ ಶಾಟ್‌ಗಳೊಂದಿಗೆ ಶೂಟ್ ಮಾಡಲಾಗುತ್ತಿತ್ತು. ಕೆಲವೊಮ್ಮೆ ಹೊಕ್ಕಳಿನ ಮೇಲೆ ಐಸ್ ಅಥವಾ ನೀರನ್ನು ಸುರಿಯಲಾಗುತ್ತಿತ್ತು" ಎಂದು ಅವರು ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ಆದರೆ ಆ ನಟ ಯಾರು ಎಂಬುದನ್ನು ಹೇಳಿಲ್ಲ.
ಡೈಸಿ ಕೊನೆಯದಾಗಿ 2023 ರಲ್ಲಿ ಬಿಡುಗಡೆಯಾದ ಮಿಸ್ಟರಿ ಆಫ್ ದಿ ಟ್ಯಾಟೂ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಲ್ಮಾನ್ ಖಾನ್ ಅವರ ಬಿಗ್ ಬಾಸ್ 19 ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ವದಂತಿಗಳಿವೆ.
Advertisement