

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹಲವು ಸಮಯಗಳಿಂದ ಕಾಯುತ್ತಿದ್ದ ದಿನ ಬಂದೇಬಿಟ್ಟಿದೆ. ನಾಳೆ ಡಿಸೆಂಬರ್ 11 ಗುರುವಾರ ಅವರ ಡೆವಿಲ್ ಚಿತ್ರ ಬಿಡುಗಡೆ ಆಗುತ್ತಿದೆ. ಈ ಹೊತ್ತಿನಲ್ಲಿ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್ಸ್ಟಾಗ್ರಾಂನಲ್ಲಿ ಪತ್ರ ಹಂಚಿಕೊಂಡಿದ್ದಾರೆ. ಅವರು ಬರೆದ ಪತ್ರದ ಸಾರಾಂಶ ಹೀಗಿದೆ:
ನನ್ನ ಪ್ರಿಯ ಸೆಲೆಬ್ರಿಟಿಗಳೇ,
''ಈ ಸಂದೇಶ ನೇರವಾಗಿ ನನ್ನ ಹೃದಯದಿಂದ ಬರುತ್ತಿದೆ, ಮತ್ತು ಅದನ್ನು ನಿಮಗೆ ತಲುಪಿಸುತ್ತಿರುವುದು ನನ್ನ ಪತ್ನಿ ವಿಜಿ. ನಿಮ್ಮ ಪ್ರತಿಯೊಬ್ಬರ ವಿಷಯ — ನಿಮ್ಮ ಪ್ರೀತಿ, ನಿಮ್ಮ ಕಾಳಜಿ, ನಿಮ್ಮ ಅಳಿಯದ ಬೆಂಬಲ, ರಾಜ್ಯದಾದ್ಯಂತ ಮಾಡುತ್ತಿರುವ ನಿಮ್ಮ ಪ್ರಚಾರ — ಇವನ್ನೆಲ್ಲಾ ಅವಳು ನನಗೆ ಪ್ರತೀ ಕ್ಷಣ ಹೇಳುತ್ತಿದ್ದಾಳೆ. ದೂರದಲ್ಲಿದ್ದರೂ, ನೀವು ನನ್ನ ಜೊತೆ ಇರುತ್ತೀರಂತೆ ಅನಿಸುತ್ತಿದೆ.
ನಾನು ನಿಮಗೆ ಒಂದು ವಿಷಯ ಹೇಳಬೇಕು… ಜನರು ಏನೇ ಹೇಳಿದರೂ, ಅದಕ್ಕೆ ಗಮನ ಕೊಡಬೇಡಿ. ಯಾವುದೇ ಗದ್ದಲ, ನಕಾರಾತ್ಮಕತೆಯನ್ನ ನಿಮ್ಮ ಮನಸ್ಸಿಗೆ ಹಾಕಿಕೊಳ್ಳಬೇಡಿ. ನೀವು ನನ್ನ ಶಕ್ತಿ, ನೀವು ನನ್ನ ಕುಟುಂಬ. ಇಂದಿನ ಪರಿಸ್ಥಿತಿಯಲ್ಲಿ, ನಾನು ನಿಂತಿರುವುದಕ್ಕೆ ನಿಮ್ಮ ನಂಬಿಕೆ ಕಾರಣ. ಈ ಸಮಯದಲ್ಲಿ ನನ್ನ ದೊಡ್ಡ ಬಲ ನೀವು. ಅದಕ್ಕಾಗಿ, ಚಿಂತೆಯನ್ನ ಬಿಟ್ಟು, ಆ ಪ್ರೀತಿಯನ್ನೂ ಆ ಶಕ್ತಿಯನ್ನೂ ನಮ್ಮ Devil ಸಿನಿಮಾದ ಕಡೆ ನೀಡಿ.
ನಿಮ್ಮ ಪ್ರೀತಿ, ಬೆಂಬಲದಿಂದ ನಾನು ಇಂದು ಈ ಮಟ್ಟದಲ್ಲಿ ಇದ್ದೇನೆ. Devil ಗೆ ನೀವು ಇದುವರೆಗೂ ನನಗೆ ತೋರಿಸಿದ ಹಾಗೆ ಪ್ರೀತಿ ಮತ್ತು ಬೆಂಬಲ ಕೊಡುತ್ತೀರೆಂದು ವಿಶ್ವಾಸವಿದೆ. ನನ್ನ ಅನುಪಸ್ಥಿತಿಯಲ್ಲಿ ಸಿನಿಮಾ ಗೆಲ್ಲಿಸುತ್ತೀರಿ ಎಂಬ ವಿಶ್ವಾಸವಿದೆ.
ನಿಮ್ಮ ಪ್ರಚಾರ, ನಿಮ್ಮ ಒಟ್ಟುಗೂಡಿ ನಿಂತಿರುವ ಶಕ್ತಿ—ಇವನ್ನೆಲ್ಲಾ ಕೇಳಿದಾಗ ನನಗೆ ಹೆಮ್ಮೆ ಮತ್ತು ಭಾವುಕತೆ ಬರುತ್ತದೆ. ಮತ್ತೊಮ್ಮೆ ನಿಮ್ಮನ್ನೆಲ್ಲಾ ಭೇಟಿಯಾಗಿ, ಕಣ್ಣಿಗೆ ಕಣ್ಣು ನೋಡಿ, “ನನಗಾಗಿ ನಿಂತಿದ್ದಕ್ಕೆ ಧನ್ಯವಾದಗಳು” ಎಂದು ಹೇಳೋ ದಿನಕ್ಕಾಗಿ ಕಾಯುತ್ತಿದ್ದೇನೆ.
ನೀವು ನನ್ನ ಮೇಲೆ ನಂಬಿಕೆ ಇಟ್ಟ ಹಾಗೆ, ನಾನೂ ನಿಮ್ಮ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ. ಮತ್ತು ನೆನಪಿರಲಿ—ಸಮಯ ಎಲ್ಲವನ್ನೂ ಹೇಳುತ್ತದೆ… ಸಮಯವೇ ಸತ್ಯವನ್ನು ಹೊರತೆಗೆದು ತೋರಿಸುತ್ತದೆ. ಅಷ್ಟರವರೆಗೆ, ತಲೆ ಎತ್ತಿ ನಿಲ್ಲಿ, ಹೃದಯ ಬಲವಾಗಿ ಇಟ್ಟುಕೊಳ್ಳಿ'' ಎಂದು ಸಂದೇಶ ರವಾನಿಸಿದ್ದಾರೆ.
Advertisement