

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಮಾರ್ಕ್’ ಇದೇ ಕ್ರಿಸ್ ಮಸ್ ಹಬ್ಬದ ದಿನ ತೆರೆಗೆ ಬರುತ್ತಿದೆ. ಸಿನಿಮಾದ ಪ್ರಚಾರದಲ್ಲಿ ಸುದೀಪ್ ಮತ್ತು ಚಿತ್ರತಂಡ ನಿರತವಾಗಿದೆ. ಬೆಂಗಳೂರು, ಚೆನ್ನೈ ಇನ್ನೂ ಕೆಲವೆಡೆ ಪ್ರಚಾರ ಮುಗಿಸಿರುವ ಸುದೀಪ್ ನಿನ್ನೆ ಹುಬ್ಭಳ್ಳಿಯಲ್ಲಿ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಿದ್ದರು.
ಈ ವೇಳೆ ಮಾತನಾಡಿದ್ದ ಕಿಚ್ಚ ಸುದೀಪ್ ವಿವಾದವಾಗುವ ರೀತಿಯಲ್ಲಿ ಹೇಳಿಕೆ ಕೊಟ್ಟಿರುವುದು ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಗೆ ಕಾರಣವಾಗಿದೆ. ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್ ಸಿನಿಮಾ ತಂಡವನ್ನು ಕೊಂಡಾಡುವ ಜೊತೆಗೆ ಕೆಲವರಿಗೆ ಎಚ್ಚರಿಕೆ ಸಹ ನೀಡಿದರು.
ನಾವು ಸಿನಿಮಾ ಬಿಡುಗಡೆ ಮಾಡುವ ಜೊತೆಗೆ ಯುದ್ಧವೊಂದನ್ನು ಸಹ ಮಾಡಬೇಕಿದೆ, ಹೊರಗೆ ಪಡೆ ಒಂದು ಯುದ್ಧಕ್ಕೆ ರೆಡಿ ಆಗುತ್ತಿದೆ. ನಾನು ಮಾತನಾಡಬಾರದು ಎಂದು ಸುಮ್ಮನಿದ್ದೆ, ಮಾತನಾಡಲು ಬರುವುದಿಲ್ಲ ಎಂದರ್ಥವಲ್ಲ, ಆದರೆ ಕೆರಳಿಸುತ್ತಾ ಹೋದರೆ ಸುಮ್ಮನೆ ಕೂರಲು ಆಗುವುದಿಲ್ಲ ಎಂದಿದ್ದಾರೆ.
ಬಹಳಷ್ಟು ಕಲ್ಲಿನ ತೂರಾಟ, ನಿನ್ನ ಸಹನೆಯಿಂದಾಗಿ ನಿಮ್ಮ ಮೇಲೆ ಬೀಳುತ್ತಲೇ ಇರುತ್ತೆ. ಅದನ್ನು ತಾವು ತಡ್ಕೊಂಡು ಬರ್ತಾನೇ ಇದ್ದೀರಿ. ಈಗ ಹೇಳ್ತಾ ಇದ್ದೀನಿ. ಅದನ್ನು ತಡಿಯೋ ತನಕ ತಡ್ಕೊಂಡು ಇರಿ. ಮಾತನ್ನಾಡೋ ಟೈಮ್ನಲ್ಲಿ ಮಾತನ್ನಾಡಿ.
ಮಾರ್ಕ್ ಒಂದು ಅದ್ಭುತವಾದ ಸಿನಿಮಾ. ವಿಜಯ್ ಕಾರ್ತಿಕೇಯ ತಾವು ಎಲ್ಲಿದ್ದರೂ ಥ್ಯಾಂಕ್ಯೂ. ಡಿಸೆಂಬರ್ 25 ರಂದು ಸಿನಿಮಾ ರಿಲೀಸ್ ಆಗ್ತಿದೆ. ಹುಬ್ಬಳ್ಳಿ ಥಿಯೇಟರ್ನಲ್ಲಿ ಕೇಳಿ ಬರುವ ಕೂಗು ನನಗೆ ಬೆಂಗಳೂರಿನಲ್ಲಿ ಕೇಳಿಸಬೇಕು ಎಂದರು.
ಸುದೀಪ್ ಅವರ ಈ ಮಾತುಗಳಿಗೆ ತರಹೇವಾರಿ ಕಮೆಂಟ್ ಕೇಳಿಬರುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸುದೀಪ್ ಅವರ ಈ ಮಾತುಗಳಿಗೆ ಅರ್ಥ ಕಲ್ಪಿಸುತ್ತಿದ್ದಾರೆ. ಸುದೀಪ್ ಅವರು ‘45’ ಸಿನಿಮಾದ ಕುರಿತು ಮಾತನಾಡಿದ್ದಾರೆ ಎಂದು ಸಹ ಕೆಲವರು ಹೇಳುತ್ತಿದ್ದಾರೆ. ಇನ್ನು ಕೆಲವರು ನಟ ದರ್ಶನ್ ಫ್ಯಾನ್ಸ್ ಗೆ ಹೇಳಿದ್ದಾರೆ ಅನಿಸುತ್ತದೆ.
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇದೇ ತಿಂಗಳು 11 ರಂದು ಬಿಡುಗಡೆ ಆಗಿತ್ತು. ಮೊದಲ ದಿನ ಉತ್ತಮ ಗಳಿಕೆ ಕಂಡು ನಂತರ ತುಸು ಮಂಕಾಯ್ತು. ಡಿಸೆಂಬರ್ 25ರಂದು ಸುದೀಪ್ ನಟನೆಯ ‘ಮಾರ್ಕ್’ ಮತ್ತು ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ 45 ಸಿನಿಮಾ ಬಿಡುಗಡೆ ಆಗುತ್ತಿದೆ.
Advertisement