

ಚಿಕ್ಕಣ್ಣ ನಾಯಕ ನಟರಾಗಿರುವ ಜೋಡೆತ್ತು ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿತ್ತು. ಚಿತ್ರತಂಡ ಇದೀಗ ಶೂಟಿಂಗ್‌ಗೆ ಸಜ್ಜಾಗಿದೆ. ಅಧ್ಯಕ್ಷ, ರಾಬರ್ಟ್, ಕಾಟೇರ ಹಾಗೂ ಇತ್ತೀಚೆಗೆ ಬಿಡುಗಡೆಯಾದ ‘ದಿ ಡೆವಿಲ್’ ಸಿನಿಮಾಕ್ಕೆ ಕ್ಯಾಮೆರಾಮನ್ ಆಗಿದ್ದ ಸುಧಾಕರ್ ಎಸ್ ರಾಜ್ ಈ ಸಿನಿಮಾ ಮೂಲಕ ನಿರ್ದೇಶನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಇಡೀ ಸಿನಿಮಾ ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ಕಟ್ಟಿಕೊಡುವ ಬಯಕೆಯಿಂದ, ಅದಕ್ಕಾಗಿ ಒಂದು ಗ್ರಾಮವನ್ನೇ ಸೆಟ್ ನಲ್ಲಿ ನಿರ್ಮಿಸುತ್ತಿದೆ ‘ಜೋಡೆತ್ತು’ ತಂಡ. ಇದಕ್ಕಾಗಿ ಚಿಕ್ಕಮಗಳೂರಿನಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ಜನವರಿ 5ರಿಂದ ಚಿತ್ರೀಕರಣ ಶುರುವಾಗಲಿದೆ.
ಸೋಮಶೇಖರ್ (ಕಟ್ಟಿಗೇನಹಳ್ಳಿ) ನಿರ್ಮಾಣದ ಜೋಡೆತ್ತು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಆಕಾಶ್ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾವಿದು. ಚಿಕ್ಕಣ್ಣ ಜತೆಗೆ ತೆಲುಗಿನ ಸುನಿಲ್ ಸಹ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇವರೊಟ್ಟಿಗೆ ಇನ್ನೂ ಅನೇಕ ಕಲಾವಿದರು ನಟಿಸಲಿದ್ದು, ಅದರ ಕುರಿತು ಸದ್ಯದಲ್ಲೇ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಲಿದೆ.
1997 ರಲ್ಲಿ, ನಾಗತಿಹಳ್ಳಿ ಚಂದ್ರಶೇಖರ್ ಅವರ ಹೂಮಳೆ ಚಿತ್ರದಲ್ಲಿ ಸ್ಟಿಲ್ ಛಾಯಾಗ್ರಾಹಕರಾಗಿ ಕೆಲಸ ಮಾಡುವಾಗಿನಿಂದಾಗಲೇ ನಿರ್ದೇಶನದತ್ತ ಒಲವು ಪ್ರಾರಂಭವಾಯಿತು. ಛಾಯಾಗ್ರಹಣದಲ್ಲಿ ತಮ್ಮ ಕಲೆಯನ್ನು ಮೊದಲು ಪರಿಷ್ಕರಿಸಲು ಸಲಹೆ ನೀಡಿದ ನಂತರ, ಸುಧಾಕರ್ ಛಾಯಾಗ್ರಾಹಕರಾಗಿ ದಶಕಗಳ ಕಾಲ ಕಳೆದರು. ಈಗ, ಅವರು ಸಿನಿಮಾ ಮೇಲಿನ ಪ್ರೀತಿಯಿಂದ ನಿರ್ದೇಶಕ ಮತ್ತು ಛಾಯಾಗ್ರಾಹಕರಾಗಿ ಡಬಲ್ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ.
ಈ ಸಿನಿಮಾದ ಕಥೆ 80ರ ದಶಕದ ಕಾಲಘಟ್ಟದಲ್ಲಿ ನಡೆಯುತ್ತದೆ. ನಿಜವಾದ ‘ಜೋಡೆತ್ತು’ ಯಾರೆಂಬುದನ್ನು ಸದ್ಯದಲ್ಲೇ ತಿಳಿಸುತ್ತೇವೆ. ಇದು ನನ್ನ ಕೆರಿಯರ್‌ನಲ್ಲೇ ದೊಡ್ಡ ಬಜೆಟ್‌ನ ಸಿನಿಮಾ. ಹಳ್ಳಿಯಲ್ಲಿ ಶುರುವಾಗಿ ಹಳ್ಳಿಯಲ್ಲೇ ಮುಗಿಯುವ ಸಿನಿಮಾ. ಫ್ಯಾಮಿಲಿ ಸೆಂಟಿಮೆಂಟ್, ಕಾಮಿಡಿ, ಆಕ್ಷನ್ ಎಲ್ಲಾ ಅಂಶಗಳೂ ಕೂಡಿರುವ ಸಿನಿಮಾವಿದು ಎಂದು ನಟ ಚಿಕ್ಕಣ್ಣ ಮಾಹಿತಿ ನೀಡಿದ್ದಾರೆ.
ಇನ್ನು ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದು, ಐದು ಹಾಡುಗಳಿರಲಿವೆ. ಮಾಸ್ತಿ, ರಾಜಶೇಖರ್ ಹಾಗೂ ರಘು ನಿಡುವಳ್ಳಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದು, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಜೋಡೆತ್ತು ಸಿನಿಮಾಕ್ಕಿದೆ. ಎಲ್ಲಾ ಅಂದುಕೊಂಡಂತೆ ಆದರೆ 2026ರಲ್ಲಿ ಸಿನಿಮಾ ತೆರೆಕಾಣಲಿದೆ.
Advertisement