
ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಮಾನಿಗಳ ಪಾಲಿನ ಡಿ ಬಾಸ್ ದರ್ಶನ್ ಅವರ 48ನೇ ವರ್ಷದ ಹುಟ್ಟುಹಬ್ಬ ಇಂದು. ಸಾಮಾನ್ಯವಾಗಿ ದರ್ಶನ್ ಹುಟ್ಟುಹಬ್ಬವೆಂದರೆ ಅವರ ಅಭಿಮಾನಿಗಳಿಗೆ ಸಡಗರ, ಅಂದು ಅನೇಕ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳುತ್ತಾರೆ.
ಆದರೆ ಈ ಬಾರಿ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಕೆಲ ದಿನಗಳ ಹಿಂದೆ ವಿಡಿಯೊ ಮಾಡಿ ತಮ್ಮ ಅಭಿಮಾನಿಗಳಿಗೆ ದರ್ಶನ್ ವಿನಂತಿ ಮಾಡಿಕೊಂಡಿದ್ದರು.
ಚಿತ್ರತಂಡಗಳಿಂದ ವಿಶೇಷ
ದರ್ಶನ್ ಬರ್ತ್‌ಡೇಗೆ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ಡೆವಿಲ್ ಚಿತ್ರತಂಡ 'ಸರ್‌ಪ್ರೈಸ್' ರೆಡಿ ಮಾಡಿದೆ ಎನ್ನಲಾಗಿದೆ. ಕಳೆದ ವರ್ಷ, ಅಂದರೆ 2024ರಲ್ಲಿ ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ 'ಡೆವಿಲ್' ಚಿತ್ರ ಶೂಟಿಂಗ್ ಶುರು ಮಾಡಿಕೊಂಡಿತ್ತು. ಆದರೆ, ನಟ ದರ್ಶನ್ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿಕೊಂಡ ಬಳಿಕ ಡೆವಿಲ್ ಶೂಟಿಂಗ್ ಸಹಜವಾಗಿ ನಿಂತಿದೆ. ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಆಗಿರುವ ನಟ ದರ್ಶನ್, ಆ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ.
ಸದ್ಯ ನಟ ದರ್ಶನ್ ಬೆನ್ನುನೋವಿನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಡೆವಿಲ್ ಶೂಟಿಂಗ್ ಮತ್ತೆ ಶುರುವಾಗಿಲ್ಲ. ಆದರೆ, ಈಗಾಗಲೇ ಆಗಿರುವ ಶೂಟಿಂಗ್ ಬಳಸಿ ನಟ ದರ್ಶನ್ ಹುಟ್ಟುಹಬ್ಬಕ್ಕೆ 'ಡೆವಿಲ್' ಟೀಸರ್ ರೆಡಿ ಮಾಡಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಈ ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸುಳಿವು ದೊರಕಿದೆ. ಇಂದೇ ಡೆವಿಲ್ ಟೀಸರ್ ಲಾಂಚ್‌ಗೆ ಪ್ಲಾನ್ ನಡೆದಿದೆ ಎನ್ನಲಾಗಿದೆ.
ದರ್ಶನ್ ತನ್ನ ಆಪ್ತ ಸ್ನೇಹಿತೆ ರಕ್ಷಿತಾ ಅವರ ಪತಿ ಸಿನಿಮಾ ನಿರ್ದೇಶಕ ಪ್ರೇಮ್ ಅವರ ಜೊತೆ ಸಿನಿಮಾ ಮಾಡುವುದಾಗಿ ಒಪ್ಪಿಕೊಂಡಿದ್ದರೂ ಅದು ಮುಂದೆ ಹೋಗಿದೆ. ಆದರೆ ಇಂದು ಮಧ್ಯಾಹ್ನ ಮಹತ್ವದ ಘೋಷಣೆ ಮಾಡುವುದಾಗಿ ನಿರ್ದೇಶಕ ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ದರ್ಶನ್ ಮನೆಗೆ ಭದ್ರತೆ
ಇಂದು ನಟ ದರ್ಶನ್ ಅಭಿಮಾನಿಗಳಿಗೆ ಸಿಗದಿದ್ದರೂ ಅವರನ್ನು ನೋಡುವ ತವಕ ಕಡಿಮೆಯಾಗಿಲ್ಲ. ಅವರ ಬೆಂಗಳೂರಿನ ರಾಜರಾಜೇಶ್ವರಿ ನಗರ ಮನೆಯ ಪಕ್ಕ ಅಭಿಮಾನಿಗಳು ಸುಳಿದಾಡುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಭದ್ರತೆಯಲ್ಲಿದ್ದಾರೆ.
ಅಭಿಮಾನಿಗಳಿಗೆ ಕಾಮನ್ ಡಿಪಿ
ಇನ್ನು ತಮ್ಮ ಪತಿಯ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗಾಗಿ ವಿಜಯಲಕ್ಷ್ಮಿ ದರ್ಶನ್ ಕಾಮನ್ ಡಿಪಿಯನ್ನು ತಮ್ಮ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಿರ್ದೇಶಕ ತರುಣ್ ಸುಧೀರ್ ನಿರ್ದೇಶನದಲ್ಲಿ ದರ್ಶನ್ ನಟಿಸಲಿರುವ 59ನೇ ಚಿತ್ರ ವೀರ ಸಿಂಧೂರ ಚಿತ್ರತಂಡ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ.
Advertisement