
'ಅಪಾಯವಿದೆ ಎಚ್ಚರಿಕೆ' ಕನ್ನಡ ಚಿತ್ರರಂಗದ ವಿಭಿನ್ನ ಕಥೆಯ ಹಾರರ್ ಥ್ರಿಲ್ಲರ್. ಕೆಲ ಸಮಯದ ಹಿಂದಷ್ಟೇ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ ತನ್ನ ವಿಶೇಷತೆಯಿಂದ ನಿರೀಕ್ಷೆ ಹುಟ್ಟಿಸಿತ್ತು. ನಂತರ "ಬ್ಯಾಚುಲರ್ ಬದುಕು" ಅನ್ನೋ ಸಾಂಗ್ ಬಿಡುಗಡೆಗೊಳಿಸಿ, ಎಲ್ಲಾ ಬ್ಯಾಚುಲರ್ಸ್ ಬದುಕಿನ ಬವಣೆಗಳ ನೈಜತೆಯನ್ನು ತೋರಿಸಿದ್ದ ಚಿತ್ರತಂಡ ಇದೀಗ ಟೀಸರ್ ಬಿಡುಗಡೆಗೊಳಿಸಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಸಸ್ಪೆನ್ಸ್ ಹಾರರ್ ಥ್ರಿಲ್ಲರ್ ಸಿನಿಮಾವನ್ನು ಅಭಿಜಿತ್ ತೀರ್ಥಹಳ್ಳಿ ಬರೆದು, ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಬಹುತೇಕ ಭಾಗವನ್ನು ಕತ್ತಲೆಯ ಕಾಡಲ್ಲೇ ಚಿತ್ರೀಕರಿಸುವ ಮೂಲಕ ವೀಕ್ಷಕರ ಗಮನ ಸೆಳೆಯುವಂತೆ ಮಾಡಿದ್ದಾರೆ. ಹೊಸ ತರಹದ ಚಿತ್ರಕಥೆಯುಳ್ಳ ಈ ಚಿತ್ರದ ಮೇಕಿಂಗ್, ಮ್ಯೂಸಿಕ್, ಲೊಕೇಶನ್ ಎಲ್ಲವೂ ಭರವಸೆ ಮೂಡಿಸಿ ಸದ್ದು ಮಾಡುತ್ತಿವೆ.
ಅಣ್ಣಯ್ಯ ಧಾರಾವಾಹಿ ಖ್ಯಾತಿಯ ನಟ ವಿಕಾಶ್ ಉತ್ತಯ್ಯ, ಅಮೃತಧಾರೆ ಖ್ಯಾತಿಯ ರಾಧಾ ಭಗವತಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ಅಪಾಯವಿದೆ ಎಚ್ಚರಿಕೆ' ಚಿತ್ರ ತಾಂತ್ರಿಕವಾಗಿ ಉತ್ತಮವಾಗಿ ಮೂಡಿ ಬರುತ್ತಿದೆ ಅನ್ನೋ ಸುಳಿವನ್ನು ಟೀಸರ್ ಬಿಟ್ಟುಕೊಟ್ಟಿದೆ. ದೃಶ್ಯಗಳು, ಮ್ಯೂಸಿಕ್ ಕುತೂಹಲ ಮೂಡಿಸುವಂತಿವೆ. ಒಟ್ಟಾರೆ ಆಸನದ ತುದಿಯಲ್ಲಿ ಕುಳಿತು ನೋಡುವ ಸಿನಿಮಾ ಇದಾಗಿದ್ದು, ಪ್ರೇಕ್ಷಕರಿಗೆ ಮನರಂಜನೆ ಒದಗಿಸುವ ಭರವಸೆ ನೀಡಿದ್ದಾರೆ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ. ಫೆಬ್ರವರಿ 7ಕ್ಕೆ "ಅಪಾಯವಿದೆ ಎಚ್ಚರಿಕೆ" ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಯಶಸ್ವಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ವಿಜಿ ಮಂಜುನಾಥ್ ಮತ್ತು ಪೂರ್ಣಿಮಾ ಎಂ ಗೌಡ ಅವರ ಬೆಂಬಲದೊಂದಿಗೆ, ಚಿತ್ರಕ್ಕೆ ಸುನಾದ ಗೌತಮ್ ಅವರ ಸಂಗೀತ ಮತ್ತು ಛಾಯಾಗ್ರಹಣವಿದೆ.
Advertisement