
ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ದಿನವಾದ ಇಂದು ಜನವರಿ 8ರಂದು ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ನ ಗ್ಲಿಂಪ್ಸ್ ರಿಲೀಸ್ ಆಗಿದೆ. ಸಹಜವಾಗಿ ಯಶ್ ಅಭಿಮಾನಿಗಳು ಸಂತೋಷಗೊಂಡಿದ್ದಾರೆ. ಯಶ್ ಬರ್ತ್ ಡೇಗೆ ಅಭಿಮಾನಿಗಳಿಗೆ ಇದು ಟ್ರೀಟ್ ಎನ್ನಬಹುದು.
ಯಶ್ ಅವರು ರೆಟ್ರೋ ಕಾರಲ್ಲಿ ಸ್ಟೈಲಿಶ್ ಆಗಿ ಕ್ಲಬ್ ಒಂದಕ್ಕೆ ಎಂಟ್ರಿ ಕೊಡುತ್ತಾರೆ. ಕ್ಲಬ್ ಒಳಗೆ ಬರುತ್ತಿರುವಾಗ ಅಲ್ಲಿ ಎಲ್ಲರೂ ಮೋಜು-ಮಸ್ತಿಯಲ್ಲಿ ತೇಲುತ್ತಾ ಇರುತ್ತಾರೆ. ಆಗ ಯಶ್ ಅವರು ಹೆಂಡದ ಬಾಟಲಿ ತೆಗೆದುಕೊಂಡು ಅಲ್ಲಿದ್ದ ಮಹಿಳೆಯ ಮೇಲೆ ಸುರಿಯುತ್ತಾರೆ. ಮೇಕಿಂಗ್ ನೋಡಿದರೆ ಇದು ರೆಟ್ರೋ ಕಥೆಯ ರೀತಿ ಕಾಣುತ್ತದೆ.
ಇಂದು ಯಶ್ ಜನ್ಮದಿನದ ಪ್ರಯುಕ್ತ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಇದು ಸಿನಿಮಾದಲ್ಲಿ ಬರುವ ಒಂದು ಕ್ಲಿಪ್ ಎನ್ನಲಾಗಿದೆ. ಡ್ರಗ್ಸ್ ಕಥೆಯಾಧಾರಿತ ಚಿತ್ರ ‘ಟಾಕ್ಸಿಕ್’ ಆಗಿದೆ.
‘ಟಾಕ್ಸಿಕ್’ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರಡಕ್ಷನ್ಸ್ ನಡಿಯಲ್ಲಿ ವೆಂಕಟ್ ನಾರಾಯಣ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಬಿಗ್ ಬಜೆಟ್ನಲ್ಲಿ ಮೂಡಿ ಬರುತ್ತಿದೆ. ಚಿತ್ರದಲ್ಲಿ ಹಿಂದಿಯ ಕಿಯಾರಾ ಅಡ್ವಾಣಿ, ತಮಿಳಿನ ನಯನತಾರಾ ನಟಿಸುತ್ತಿದ್ದಾರೆ. ಹಾಲಿವುಡ್ ತಂತ್ರಜ್ಞರು ಕೆಲಸ ಮಾಡುತ್ತಿರುವ ಚಿತ್ರ ಈ ವರ್ಷಾಂತ್ಯಕ್ಕೆ ತೆರೆಗೆ ಬರುವ ನಿರೀಕ್ಷೆಯಿದೆ.
Advertisement