
ಬೆಂಗಳೂರು: ರಿಷಬ್ ಶೆಟ್ಟಿ, ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ: ಚಾಪ್ಟರ್ 1’ ಚಿತ್ರದ ಶೂಟಿಂಗ್ ವೇಳೆ ಕಾಡಿನಲ್ಲಿ ಬ್ಲಾಸ್ಟ್ ಮಾಡಿ ಅರಣ್ಯ ನಿಯಮ ಉಲ್ಲಂಘನೆ ಮಾಡಿದ ಆರೋಪ ಕೇಳಿಬಂದಿತ್ತು. ಶೂಟಿಂಗ್ ವೇಳೆ ಕಾಡಿನಲ್ಲಿ ಬೆಂಕಿ ಹಚ್ಚಿ ಸಾಕಷ್ಟು ಹಾನಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಇದೀಗ ಪ್ರಕರಣದಲ್ಲಿ ಚಿತ್ರತಂಡಕ್ಕೆ ಕ್ಲೀನ್ ಚಿಟ್ ಸಿಕ್ಕಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೇರೂರು ಗ್ರಾಮದ ಸಮೀಪ ಇರುವ ಗವಿಗುಡ್ಡ ಪ್ರದೇಶದ ಡೀಮ್ಡ್ ಅರಣ್ಯ ಹಾಗು ಗೋಮಾಳ ಜಮೀನಿನಲ್ಲಿ ಚಿತ್ರೀಕರಣ ಮಾಡಲು ಕಾಂತಾರ ತಂಡ ಅನುಮತಿ ಪಡೆದಿಕೊಂಡಿತ್ತು. ತಂಡದವರು ಅಕ್ರಮವಾಗಿ ಮರಕಡಿದು, ಸ್ಫೋಟಕ ಬಳಸಿ, ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಕೆಲ ಸ್ಥಳೀಯರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಅರಣ್ಯಾಧಿಕಾರಿಗಳ ತಂಡ ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಕ್ಲೀನ್ ಚಿಟ್ ನೀಡಿದೆ.
ಸ್ಥಳೀಯರ ಆರೋಪ
ಸಿನಿಮಾ ಚಿತ್ರೀಕರಣದ ವೇಳೆ ಬ್ಲಾಸ್ಟ್ ಮಾಡಲಾಗಿದೆ, ಮರ ಕಡಿಯಲಾಗಿದೆ, ಇದರಿಂದ ಕಾಡು ಪ್ರಾಣಿಗಳು ಗ್ರಾಮಗಳತ್ತ ನುಗ್ಗಿ ಬರುತ್ತಿವೆ. ಇದರಿಂದ ಸ್ಥಳೀಯರಿಗೆ ಸಮಸ್ಯೆ ಆಗುತ್ತಿದೆ ಎಂದು ಕೆಲವರು ಆರೋಪಿಸಿದ್ದರು.
ತನಿಖೆಗೆ ಆದೇಶ
ಈ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ತನಿಖೆ ನಡೆಸಿ 24 ಗಂಟೆಯೊಳಗೆ ವರದಿ ನೀಡಿ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಬಗ್ಗೆ ಸ್ಥಳಪರಿಶೀಲನೆ ನಡೆಸಿದ್ದ ಸಕಲೇಶಪುರ ಎಸಿಎಫ್ ಮಧು ಹಾಗು ಯಸಳೂರು ವಿಭಾಗದ ಆರ್ಎಫ್ಓ ಕೃಷ್ಣ ನೇತೃತ್ವದ ತಂಡ ಚಲನಚಿತ್ರದ ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿದ್ದರು. ಆ ಬಳಿಕ ಡಿಸಿಎಫ್ಗೆ ವರದಿ ನೀಡಿದ್ದು, ‘ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ’ ಎಂದು ವರದಿ ನೀಡಿದ್ದರು.
ಹೀಗಾಗಿ ಚಿತ್ರತಂಡಕ್ಕೆ ಯಾವುದೇ ಅಡ್ಡಿಯಿಲ್ಲದೆ ಸಿನಿಮಾ ಶೂಟಿಂಗ್ ಮುಂದುವರಿಸಲು ಅವಕಾಶ ಸಿಕ್ಕಿದೆ.
Advertisement