
ಬಿಗ್ ಬಾಸ್ 12ನೇ ಸೀಸನ್ ನಿರೂಪಣೆಯನ್ನು ತಾವೇ ಮಾಡುತ್ತಿರುವುದಾಗಿ ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಘೋಷಣೆ ಮಾಡಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ನಂತರ ಇದೀಗ ತಮ್ಮ ಹೊಸ ಸಿನಿಮಾವನ್ನು ಪ್ರಕಟಿಸಿದ್ದಾರೆ.
ಅನೂಪ್ ಭಂಡಾರಿ ನಿರ್ದೇಶನದಲ್ಲಿ ಬಿಲ್ಲ ರಂಗ ಬಾಷ (BRB) ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ಸಜ್ಜಾದ ಕಿಚ್ಚ ಸುದೀಪ್ ಮುಂದಿನ ಸಿನಿಮಾ ಅನೌನ್ಸ್ ಮಾಡಿದ್ದಾರೆ.ತಮ್ಮ 47 ನೇ ಸಿನಿಮಾವನ್ನು ಮ್ಯಾಕ್ಸ್ ನಂತರ ಮತ್ತೆ ವಿಜಯ್ ಕಾರ್ತಿಕೇಯ ಜೊತೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಇಂದು ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಿನಿಮಾ ಘೋಷಣೆ ಬಗ್ಗೆ ಸುದ್ದಿಗೋಷ್ಠಿ ಕರೆದಿದ್ದರು. ಟೀಸರ್ ರಿಲೀಸ್ ಮಾಡುವ ಮೂಲಕ ಕಿಚ್ಚನ 47 ನೇ ಸಿನಿಮಾ ರಿವೀಲ್ ಮಾಡಲಾಗಿದೆ.
ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಕೆ 47’ ಎನ್ನುವ ಶೀರ್ಷಿಕೆ ಇಡಲಾಗಿದೆ. ಜುಲೈ 7 ರಿಂದ ಸಿನಿಮಾ ಶೂಟಿಂಗ್ ಆರಂಭಿಸಲಿದ್ದು ಕ್ರಿಸ್ ಮಸ್ ವೇಳೆಗೆ ಬಿಡುಗಡೆಗೆ ಚಿತ್ರತಂಡ ಯೋಜನೆ ಮಾಡಿಕೊಂಡಿದೆ.
ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಹಿಟ್ ಆಯಿತು. ಈ ಚಿತ್ರಕ್ಕೆ ಸೀಕ್ವೆಲ್ ಬರಲಿದೆ ಎನ್ನುವ ಸುದ್ದಿ ಇತ್ತು. ‘ಕೆ 47’ ಚಿತ್ರ ಮ್ಯಾಕ್ಸ್ ಸೀಕ್ವೆಲ್ ಎನ್ನುವ ಮಾತು ಕೇಳಿ ಬಂದಿತ್ತು. ಇದಕ್ಕೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ‘ಇದು ಮ್ಯಾಕ್ಸ್ 2 ಅಲ್ಲ. ಅದನ್ನು ಮಾಡೋಕೆ ಕುಳಿತಿದ್ದು ಹೌದು. ಆದರೆ ಕಥೆ ಶೇಪ್ ಬಂದಿಲ್ಲ. ನಾವೇ ಫೋರ್ಸ್ ಮಾಡುತ್ತಾ ಇದ್ದಂತೆ ಕಂಡುಬಂತು, ಹೀಗಾಗಿ, ಸದ್ಯಕ್ಕೆ ಅದನ್ನು ಹೋಲ್ಡ್ ಮಾಡಿದ್ದೇವೆ’ ಎಂದರು.
ಸುದೀಪ್ 47ನೇ ಚಿತ್ರವನ್ನು ತಮಿಳಿನ ಬಿಗ್ ಪ್ರೊಡಕ್ಷನ್ ಹೌಸ್ ಸತ್ಯಜ್ಯೋತಿ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ವಿಷ್ಣುವರ್ಧನ್ ಜೊತೆ ಸತ್ಯಜ್ಯೋತಿ ಚಿತ್ರ ನಿರ್ಮಾಣ ಮಾಡಿದ್ದ ಸತ್ಯಜ್ಯೋತಿ ಫಿಲಂಸ್ ಈಗ 39 ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರನಿರ್ಮಾಣಕ್ಕೆ ಕೈ ಹಾಕಿದೆ.
Advertisement