
ಬೆಂಗಳೂರು: ಬುಧವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಘಟನೆಯನ್ನು ನಾನು ಕಣ್ಣಾರೆ ನೋಡಿದೆ ಎಂದು ರ‍್ಯಾಪರ್ ಚಂದನ್ ಶೆಟ್ಟಿ ಹೇಳಿದ್ದಾರೆ.
ಆರ್‌ಸಿಬಿ (RCB) ಗೆಲುವಿನ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ ಕುರಿತು ಮಾತನಾಡಿದ ಅವರು, ಗೇಟ್ ನಂಬರ್ 3ರಲ್ಲಿ ಹೋಗಲು ನನಗೆ ಪಾಸ್ ಸಿಕ್ಕಿತ್ತು. ಗೇಟ್ ನಂಬರ್ 3ಕ್ಕೆ ತಲುಪಲು ಆಗಲೇ ಇಲ್ಲ, ಅಷ್ಟು ಜನ ಸೇರಿದ್ದರು. ಗೇಟ್ ನಂಬರ್ 10ಕ್ಕೆ ಹೋದೆ, ಅಲ್ಲೂ ತುಂಬಾ ಜನರಿದ್ದರು. ಜನರ ಮಧ್ಯೆ ಸಿಲುಕಿ ನನಗೂ ಉಸಿರಾಡಲು ಕಷ್ಟ ಆಯಿತು ಎಂದರು.
ಅಲ್ಲಿಂದ ಹೇಗೋ ಮಾಡಿ ಗೇಟ್ ನಂಬರ್ 10 ಹತ್ತಿರ ಬಂದೆ. ಅಲ್ಲಿ ಇನ್ನೂ ತುಂಬಾ ತುಂಬಾ ಕ್ರೌಡ್ ಇತ್ತು. ಒಂದು ಘಳಿಗೆ ನನಗೆ ಉಸಿರಾಡೋಕೆ ಕಷ್ಟ ಆಯ್ತು. ಅದೆಷ್ಟು ಕಷ್ಟ ಆಗಿರಬಹುದು ಎನ್ನುವುದು ನನಗೆ ಅನಿಸಿತು. ಕಾಲ್ತುಳಿತದಲ್ಲಿ ಮೃತಪಟ್ಟ 11 ಜನರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ ಚಂದನ್ ಶೆಟ್ಟಿ.
"ಆ ಕ್ಷಣ ಅಲ್ಲಿ ಏನಾಗಿರಬಹುದು ಎಂಬುದು ನಾನು ಊಹಿಸಿದೆ. ಯಾಕೆಂದರೆ, ನಾನು ಅಂಥದ್ದೇ ಪರಿಸ್ಥಿತಿಯನ್ನು ಅಲ್ಲಿ ಎದುರಿಸಿದೆ. ಕಾಲ್ತುಳಿತಲ್ಲಿ ಪ್ರಾಣ ಕಳೆದಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ನಾನು ಕೇಳಿಕೊಳ್ಳುತ್ತೇನೆ. ನನಗಂತೂ ತುಂಬಾ ಬೇಜಾರು ಆಗ್ತಿದೆ. ಇದಕ್ಕೆ ಯಾರು ಹೊಣೆ ಅಂತ ಹೇಳೋದಕ್ಕೆ ತುಂಬಾ ಕಷ್ಟ ಆಗ್ತಿದೆ. ಸರಿಯಾಗಿ ಆಯೋಜನೆ ಮಾಡಲಿಲ್ವಾ" ಎಂದು ಬೇಸರ ಮಾಡಿಕೊಂಡಿದ್ದಾರೆ ಚಂದನ್ ಶೆಟ್ಟಿ.
ಇಲ್ಲ, ಎರಡ್ಮೂರು ದಿನ ಬಿಟ್ಟು ಸರಿಯಾಗಿ ಪಾಸ್‌ಗಳನ್ನು ಹಂಚಿ ಶನಿವಾರನೋ, ಭಾನುವಾರನೋ ಇವೆಂಟ್ ಮಾಡಬಹುದಿತ್ತಾ? ನನಗೆ ಗೊತ್ತಿಲ್ಲ. ಆದರೆ ಇನ್ನೂ ಯಾರೆಲ್ಲಾ ಗಂಭೀರ ಪರಿಸ್ಥಿತಿಯಲ್ಲಿ ಇದ್ದಾರೋ, ಅವರೆಲ್ಲಾ ಬೇಗ ಗುಣವಾಗಿ ಬರಲಿ ಅಂತ ದೇವರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ. ಆ 11 ಜೀವಗಳ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಚಂದನ್ ಶೆಟ್ಟಿ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ 11 ಆರ್‌ಸಿಬಿ ಅಭಿಮಾನಿಗಳು ದುರ್ಮರಣಕ್ಕೀಡಾಗಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
Advertisement