
ಚೆನ್ನೈ: ಸುಮಾರು 4 ದಶಕಗಳ ನಂತರ ಮಣಿರತ್ನಂ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ನ 'ಥಗ್ ಲೈಪ್ ' ಕರ್ನಾಟಕ ಹೊರತುಪಡಿಸಿದರೆ ದೇಶಾದ್ಯಂತ ಗುರುವಾರ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿರುವ ಕೆಲವು ಕಮಲ್ ಹಾಸನ್ ಅಭಿಮಾನಿಗಳು ತಮಿಳುನಾಡಿನ ಹೊಸೂರಿಗೆ ತೆರಳಿ ಸಿನಿಮಾ ವೀಕ್ಷಿಸಿರುವುದಾಗಿ ವರದಿಯಾಗಿದೆ.
ತಮಿಳುನಾಡಿನಲ್ಲಿ ಅದ್ದೂರಿಯಾಗಿ ಚಿತ್ರ ಬಿಡುಗಡೆಯಾಗಿದ್ದು, ಥಿಯೇಟರ್ ಮುಂದೆ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಅಭಿಮಾನಿಗಳು ಚಿತ್ರದ ಕುರಿತು ಚರ್ಚೆ ಮಾಡುತ್ತಿದ್ದು, ಕೆಲವರು ಸೂಪರ್ ರೇಟಿಂಗ್ ಕೊಡುತ್ತಿದ್ದರೆ, ಮತ್ತೆ ಕೆಲವರು ಮಣಿರತ್ನಂ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ನಲ್ಲಿ 1987 ರಲ್ಲಿ ಬಂದಿದ್ದ 'ನಾಯಕನ್' ಜೊತೆಗೆ ಹೋಲಿಸುತ್ತಿದ್ದಾರೆ.
ಬೆಂಗಳೂರು ನಗರದಲ್ಲಿರುವ ಕಮಲ್ ಹಾಸನ್ ಬೆಂಬಲಿಗರು 42 ಕಿ. ಮೀ.ದೂರದಲ್ಲಿರುವ ಹೊಸೂರುಗೆ ತೆರಳಿ ಸಿನಿಮಾ ವೀಕ್ಷಿಸುತ್ತಿರುವ ಫೋಟೋ, ವಿಡಿಯೋಗಳು ಕೆಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ತಮಿಳು ಸುದ್ದಿವಾಹಿನಿಗಳಲ್ಲಿಯೂ ಹೊಸೂರಿನ ಚಿತ್ರಮಂದಿರದ ಮುಂದೆ ನಿಂತಿರುವ ಅಭಿಮಾನಿಗಳನ್ನು ತೋರಿಸಿವೆ.
'ಥಗ್ ಲೈಫ್' ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಕಮಲ್ ಹಾಸನ್ ಅವರ ಹೇಳಿಕೆ ಕರ್ನಾಟಕದಲ್ಲಿ ವ್ಯಾಪಕ ವಿರೋಧಕ್ಕೆ ಕಾರಣವಾಗಿದ್ದು, ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಕನ್ನಡ ಪರ ನಾಯಕರು ಹಾಗೂ ಕನ್ನಡ ಫಿಲ್ಮಂ ಚೇಂಬರ್ ಒತ್ತಾಯಿಸುತ್ತಿದೆ.
ಕೊಯಂಬತ್ತೂರಿನಲ್ಲಿ ಕೆಲ ಅಭಿಮಾನಿಗಳು ನಾವು ಕ್ಷಮೆ ಕೇಳಲ್ಲ ಎಂಬ ಬರಹ ಇರುವ ಟಿ- ಶರ್ಟ್ ಧರಿಸುವ ಮೂಲಕ ಕಮಲ್ ಹಾಸನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.
Advertisement