
ಚೆನ್ನೈ: ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶಾಲ್, ವೇದಿಕೆ ಮೇಲೆಯೇ ಮತ್ತೊಮ್ಮೆ ಅಸ್ವಸ್ಥರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದ ಮಿಸ್ ಕೂವಾಗಮ್ ಟ್ರಾನ್ಸ್‌ಜೆಂಡರ್ ಬ್ಯೂಟಿ ಕಂಟೆಸ್ಟ್‌ಗೆ ಅತಿಥಿಯಾಗಿ ತೆರಳಿದ್ದ ತಮಿಳು ನಟ ವಿಶಾಲ್ ವೇದಿಕೆಯ ಮೇಲೆ ಕುಸಿದು ಬಿದ್ದು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ವಿಲ್ಲುಪುರಂನ ಕೂವಾಗಮ್ ಗ್ರಾಮದಲ್ಲಿರುವ ದೇವಾಲಯವೊಂದರಲ್ಲಿ ಕಳೆದ ಕೆಲವು ದಿನಗಳಿಂದ ಚಿತ್ತಿರೈ (ತಮಿಳು ಮಾಸ) ಆಚರಣೆಗಳು ನಡೆಯುತ್ತಿವೆ. ವಿಶಾಲ್ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಭಾನುವಾರ (ಮೇ 11) ಆಯೋಜಕರು ಮಿಸ್ ಕೂವಾಗಮ್ ತೃತೀಯ ಲಿಂಗಿ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶಾಲ್ ಸ್ವಲ್ಪ ಸಮಯದ ನಂತರ ವೇದಿಕೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದರು.
ತಕ್ಷಣ, ವಿಶಾಲ್ ಅವರ ತಂಡ ಹಾಗೂ ಮಾಜಿ ಸಚಿವ ಕೆ. ಪೊನ್ಮುಡಿ ಮತ್ತು ಕಾರ್ಯಕ್ರಮ ಆಯೋಜಕರು ವಿಶಾಲ್ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಸದ್ಯಕ್ಕೆ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇತ್ತೀಚಿನ ದಿನಗಳಲ್ಲಿ ವಿಶಾಲ್‌ಗೆ ಇದು ಎರಡನೇ ಬಾರಿ ಸಂಭವಿಸಿದೆ. ‘ಮದ ಗಜ ರಾಜ’ ಚಿತ್ರದ ಪ್ರಚಾರದ ಸಮಯದಲ್ಲಿ ವಿಶಾಲ್ ಅವರ ಕೈಗಳು ನಡುಗುತ್ತಿತ್ತು. ಅಷ್ಟೇ ಅಲ್ಲದೆ, ತುಂಬಾ ಅಸ್ವಸ್ಥರಾಗಿರುವಂತೆ ಕಾಣುತ್ತಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿ, ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.
Advertisement