
ಬೆಂಗಳೂರು: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಮೊನ್ನೆಯಷ್ಟೇ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚೈತ್ರಾ ಕುಂದಾಪುರ ಮದುವೆಗೆ ಬಿಗ್‌ಬಾಸ್ ಸ್ಪರ್ಧಿಗಳು ಆಗಮಿಸಿ ಶುಭಹಾರೈಸಿದ್ದರು.
ಆದ್ರೆ ಚೈತ್ರಾ ಕುಂದಾಪುರ ಅವರ ಮದುವೆಗೆ ತಂದೆ ಬಂದಿರಲಿಲ್ಲ. ಆದರೀಗ ದಿಢೀರ್ ಅಂತ ಮಾಧ್ಯಮಗಳ ಮುಂದೆ ಚೈತ್ರಾ ಕುಂದಾಪುರ ತಂದೆ ಬಾಲಕೃಷ್ಣ ನಾಯ್ಕ ಪ್ರತ್ಯಕ್ಷರಾಗಿದ್ದಾರೆ. ಅಲ್ಲದೇ ಮಾಧ್ಯಮದ ಮುಂದೆ ಚೈತ್ರಾ ಕುಂದಾಪುರ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಆಕೆ ನನ್ನನ್ನು ಮದುವೆಗೆ ಕರೆದಿಲ್ಲ. ನಾನು ಮದುವೆಗೆ ಹೋಗಿಲ್ಲ. ಈ ಮದುವೆಯನ್ನು ನಾನು ಒಪ್ಪಲಾರೆ. ಚೈತ್ರಾ ಮತ್ತು ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಕೂಡ ಚೈತ್ರಾ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ.
ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಇವರು ಹಣ ಹಂಚಿಕೊಂಡಿದ್ದಾರೆ. ನನಗೆ ನನ್ನ ದೊಡ್ಡ ಮಗಳು ಮಾತ್ರ ಆಸರೆ. ನನ್ನ ದೊಡ್ಡ ಮಗಳು ಗಾಯತ್ರಿ ನಿರಪರಾಧಿ. ನಾನು ಮತ್ತು ನನ್ನ ದೊಡ್ಡ ಮಗಳು ಮರ್ಯಾದೆಯಿಂದ ಬದುಕುತ್ತಿದ್ದೇವೆ ಎಂದಿದ್ದಾರೆ.
ಚೈತ್ರಾ ಬಿಗ್‌ಬಾಸ್ ಮನೆಗೆ ಹೋಗುವಾಗಲೂ ನನಗೆ ಹೇಳಿಲ್ಲ. ನನ್ನ ಪತ್ನಿ ನನ್ನನ್ನು ಜಗಲಿಯಲ್ಲಿ ಬಿಟ್ಟು ಬೀಗ ಹಾಕಿ ಬಿಗ್‌ಬಾಸ್‌ಗೆ ಹೋಗಿದ್ದಳು. ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥವಾಗಿದ್ದೇನೆ. ನನ್ನ ಮಗಳು ಎಂದು ಹೇಳಲು ನಾಚಿಕೆಯಾಗುತ್ತದೆ. ಆಕೆ ನನ್ನ ಜೀವನದಲ್ಲಿ ಬರಲೇಬಾರದು ಜನ ಆಕೆಗೆ ಮನ್ನಣೆ ಕೊಡಬಾರದು. ತಂದೆ ಇಲ್ಲದ ಮಗಳು ಎಂದು ಹೇಳಿಕೊಂಡು ಬರುತ್ತಾಳೆ. ನನ್ನ ತಂದೆ ಬಾಲ ನಾಯ್ಕ ಗೌರವಾನ್ವಿತ ವ್ಯಕ್ತಿಯಾಗಿದ್ದರು ಅಂತ ಹೇಳಿದ್ದಾರೆ.
ಆಕೆ ಸೈನಿಕರಿಗೆ ಹಣ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಸ್ವಂತ ಹಣದಲ್ಲಿ ಕೊಟ್ಟಿದ್ದರೆ ಹೆಮ್ಮೆಯ ವಿಷಯ. ಮೋಸದ ಹಣದಲ್ಲಿ ಆಕೆ ಕೊಟ್ಟು ಪ್ರಯೋಜನ ಏನು? ಆಕೆಯ ಮದುವೆಯನ್ನು ನಾನು ಒಪ್ಪುವುದಿಲ್ಲ, ನನಗೆ ಸರಿಯಾಗಿ ಆಮಂತ್ರಣ ಕೂಡ ನೀಡಿಲ್ಲ.
ಚೈತ್ರಾ ಮದುವೆ ಸಂದರ್ಭ ನನ್ನಲ್ಲಿ ಹಣ ಕೇಳಿದಳು, ನಾನು ಹೋಟೆಲ್‌ನಲ್ಲಿ ಕೆಲಸ ಮಾಡುವ ಸಾಮಾನ್ಯ ನೌಕರ. ಚೈತ್ರಾ ಮತ್ತು ಆಕೆಯ ತಾಯಿ ಹಣಕ್ಕಾಗಿ ನನ್ನನ್ನು ದೂರವಿಟ್ಟಿದ್ದಾರೆ. ಚೈತ್ರಾ ಪತಿ ನಮ್ಮ ಮನೆಯಲ್ಲಿ ಇದ್ದವ, ಅವನು ಕೂಡ ಕಳ್ಳ” ಎಂದು ಬಾಲಕೃಷ್ಣ ನಾಯ್ಕ್ ಹೇಳಿಕೊಂಡಿದ್ದಾರೆ.
Advertisement