
ಬೆಂಗಳೂರು: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೆನೂರು ಮನು(Madenuru Manu), ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಅಭಿನಯಿಸುತ್ತಿದ್ದ ಸಹ ನಟಿ ನಟಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಗುರುವಾರ ವಶಕ್ಕೆ ಪಡೆಯಲಾಗಿದೆ.
ಸಂತ್ರಸ್ಥ ನಟಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಮನು ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿಯ ಮಡೆನೂರಿನಲ್ಲಿ ಮನು ಅವರನ್ನು ವಶಕ್ಕೆ ಪಡೆದ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಆರೋಪಿ ನಟನನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದ ಬಳಿಕ ಕಾನೂನು ಪ್ರಕ್ರಿಯೆ ಮುಂದುವರಿಸಲಾಗುವುದು. ಬಳಿಕ ಇಂದು ರಾತ್ರಿಯೇ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಮನು ಹಾಗೂ ಸಂತ್ರಸ್ತ ಯುವತಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಯುವತಿ ಜೊತೆಗೆ ಆಪ್ತತೆ ಬೆಳೆಸಿಕೊಂಡಿದ್ದ ಮನುಗೆ ಈ ಮೊದಲೇ ಮದುವೆ ಆಗಿ ಒಂದು ಮಗು ಸಹ ಇದೆ ಎನ್ನಲಾಗಿದೆ.
ಮನು ಜೊತೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಗ ಅತ್ಯಾಚಾರ ನಡೆದಿದೆ ಎಂದು ಯುವತಿ ಆರೋಪ ಹೊರಿಸಿದ್ದಾರೆ.
ಮಡೆನೂರು ಮನು ಅವರು ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿದ್ದು, ಈ ಸಿನಿಮಾ ನಾಳೆ ಬಿಡುಗಡೆ ಆಗುತ್ತಿದೆ. ಮನು ಅವರ ಮೊದಲ ಚಿತ್ರ ಬಿಡುಗಡೆಗೆ ಒಂದು ದಿನ ಬಾಕಿ ಇದೆ ಎನ್ನುವಾಗ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಸಿನಿಮಾದ ರಿಲೀಸ್ ಸಂಭ್ರಮದಲ್ಲಿ ಭಾಗಿಯಾಗಬೇಕಿದ್ದ ಅವರು ಈಗ ಪೊಲೀಸರ ಅತಿಥಿ ಆಗುವಂತಾಗಿದೆ.
ಇನ್ನು ತಮ್ಮ ಮೇಲಿನ ಆರೋಪಗಳಿಗೆ ಫೇಸ್ ಬುಕ್ ಲೈವ್ ಮೂಲಕ ಸ್ಪಷ್ಟನೆ ನೀಡಿದ ಮಡೆನೂರು ಮನು, ‘ಹರಿದಾಡ್ತಿರೋ ವಿಚಾರದ ಬಗ್ಗೆ ಸಾಕ್ಷಿ ಸಮೇತ ಕ್ಲಾರಿಟಿ ಕೊಡುತ್ತೇನೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದನ್ನು ಹೇಳುತ್ತೇನೆ. ಸಿನಿಮಾ ನಿಲ್ಲಿಸ್ಬೇಕು ಅಂತ ಒದ್ದಾಡ್ತಿದಾರೆ. ಈ ಸಿನಿಮಾ ಪ್ರಮೋಷನ್ ನೋಡಿ ಯಾರೆಲ್ಲ ನನಗೆ ಬೆದರಿಕೆ ಹಾಕ್ತಿದಾರೆ ಎಂಬುದನ್ನು ಸಾಕ್ಷಿ ಸಮೇತ ತೋರಿಸುತ್ತೇನೆ. ಕಷ್ಟಪಟ್ಟು ಸಿನಿಮಾ ಮಾಡಿದೀವಿ. ಸಿನಿಮಾಗೆ ಯಾವುದೇ ತೊಂದರೆ ಆಗಬಾರದು’ ಎಂದು ಹೇಳಿದ್ದಾರೆ.
Advertisement