
ಈ ಹಿಂದೆ ನಿಗದಿಪಡಿಸಿದ ದಿನಾಂಕವೇ ಕಾಂತಾರ ಚಾಪ್ಟರ್ 1 ಚಿತ್ರ ಬಿಡುಗಡೆಯಾಗಲಿದೆ. ಬಿಡುಗಡೆ ದಿನಾಂಕದಲ್ಲಿ ಬದಲಾವಣೆಯಿಲ್ಲ. ಯಾವುದೇ ಊಹಾಪೋಹ, ವದಂತಿಗಳನ್ನು ನಂಬಬೇಡಿ ಮತ್ತು ಹಬ್ಬಿಸದಿರಿ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಕಾಂತಾರ ಚಿತ್ರತಂಡ ಅನೇಕ ಬೇಡದ ವಿಚಾರಕ್ಕೆ ಸುದ್ದಿಯಾಗಿತ್ತು. ಚಿತ್ರೀಕರಣ ಸೆಟ್ ನಲ್ಲಿ ಅವಘಡ, ಚಿತ್ರದ ಕಲಾವಿದರ ಸಾವು ಈ ಬಗ್ಗೆ ಕೂಡ ಹೊಂಬಾಳೆ ಸಂಸ್ಥೆ ಸ್ಪಷ್ಟನೆ ನೀಡಿತ್ತು.
ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿ ಈ ಹಿಂದೆ ನಿಗದಿಪಡಿಸಿರುವಂತೆ ಇದೇ ವರ್ಷ ಅಕ್ಟೋಬರ್ 2ರಂದು ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಲಿದೆ ಎಂದಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ 2022ರ ಸೆಪ್ಟೆಂಬರ್ 30ರಂದು ರಿಲೀಸ್ ಆಗಿ ಕನ್ನಡಿಗರ ಮನಗೆದ್ದಿತ್ತು. ಕನ್ನಡ ವರ್ಷನ್‌ನಿಂದಲೇ ವಿಶ್ವಾದ್ಯಂತ ಸಿನಿಪ್ರಿಯರ ಪ್ರೀತಿಯನ್ನು ಸಂಪಾದಿಸಿತ್ತು. ಈ ಮಧ್ಯೆ ಹೊರರಾಜ್ಯಗಳಿಂದಲೂ ಬೇಡಿಕೆ ಹೆಚ್ಚಾದ ಕಾರಣ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ 'ಕಾಂತಾರ' ಚಿತ್ರವನ್ನು ಡಬ್ ಮಾಡಲಾಗಿತ್ತು. ಕಾಂತಾರ ಸಿನಿಮಾ ನೋಡಿ ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ದಂಗಾಗಿದ್ದು, ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಜಾದೂ ಮಾಡಿತ್ತು.
ಕಾಂತಾರ ಸಿನಿಮಾ ಯಶಸ್ಸಿನ ಬೆನ್ನಲೇ ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1 ಸಿನಿಮಾವನ್ನು ಘೋಷಿಸಿ ನಿರ್ದೇಶಿಸಿ, ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಂಗದೂರ್ ನಿರ್ಮಾಣ ಮಾಡುತ್ತಿದ್ದು, ಬಿ ಅಜನೀಶ್ ಲೋಕೇಶ್ ಸಂಗೀತ ನೀಡುತ್ತಿದ್ದಾರೆ.
Advertisement