
ಶೈನ್ ನಿಗಮ್ ಅಭಿನಯದ ಮುಂಬರುವ ಮಲಯಾಳಂನ ''Haal' ಸಿನಿಮಾದ ಬೀಫ್ ಬಿರಿಯಾನಿ ತಿನ್ನುವುದು, 'ಧ್ವಜ ಪ್ರಣಾಮ್' ಕುರಿತ ಸಂಭಾಷಣೆ ಸೇರಿದಂತೆ ಹಲವು ಕಡೆಗಳಲ್ಲಿ ಸೆನ್ಸಾರ್ ಬೋರ್ಡ್ ಕತ್ತರಿ ಹಾಕಿದೆ. ಪರಿಷ್ಕರಣೆ ಸಮಿತಿಯು
'ಎ' ಪ್ರಮಾಣಪತ್ರಕ್ಕೆ ಶಿಫಾರಸು ಮಾಡಿದೆ. ಚಿತ್ರವು ಧಾರ್ಮಿಕ ಸೂಕ್ಷ್ಮತೆ ಮತ್ತು ಸಾಮಾಜಿಕ- ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡಿದೆ ಎಂದು ಸಮಿತಿ ಹೇಳಿದೆ. ಕೆಲವು ದೃಶ್ಯಗಳಿಗೆ ಕತ್ತರಿ ಹಾಕದೆ ಸಾರ್ವಜನಿಕ ಪ್ರದರ್ಶನಕ್ಕೆ ಸಿನಿಮಾ ಸೂಕ್ತವಲ್ಲ ಆದರೆ ಕೆಲವು ಮಾರ್ಪಾಡುಗಳೊಂದಿಗೆ ವಯಸ್ಕರಿಗೆ ಬಿಡುಗಡೆ ಮಾಡಬಹುದು ಎಂದು ಪತ್ರದಲ್ಲಿ ಹೇಳಲಾಗಿದೆ.
ಪ್ರಮಾಣ ಪತ್ರ ನೀಡುವ ಮುನ್ನ ಚಿತ್ರದಲ್ಲಿನ ಕೆಲವೊಂದು ದೃಶ್ಯಗಳನ್ನು ತೆಗೆದುಹಾಕಬೇಕು ಎಂದು ಜೆವಿಜೆ ಪ್ರೊಡಕ್ಷನ್ಸ್‌ನ ನಿರ್ಮಾಪಕ ಜೂಬಿ ಥಾಮಸ್‌ಗೆ ಬರೆದ ಪತ್ರದಲ್ಲಿ ಸೆನ್ಸಾರ್ ಮಂಡಳಿ ಹೇಳಿದೆ.
ಮಾರಿಯಾ ಪಾತ್ರದಾರಿ ತನ್ನ ಗುರುತನ್ನು ಮರೆ ಮಾಚಲು ಮುಸ್ಲಿಂ ಉಡುಗೆ ಬಳಸುವ ಹಾಡಿನ ಸಿಕ್ವೆನ್ಸ್, ಶಾಲಾ ಹುಡುಗರ ಪೊಲೀಸ್ ವಿಚಾರಣೆ ಮತ್ತು ಕನ್ನಡಿಗರನ್ನು ಉಲ್ಲೇಖಿಸುವ ಸಂಭಾಷಣೆ, ಕ್ರಿಶ್ಚಿಯನ್ ಭಾವನೆಗಳನ್ನು ಬಾಧಿಸುವ ಸಂಭಾಷಣೆಗಳು ಮತ್ತು ದೃಶ್ಯಗಳನ್ನು ತೆಗೆದುಹಾಕಬೇಕು ಎಂದು ಸೂಚಿಸಲಾಗಿದೆ.
ಈ ಮಧ್ಯೆ ನಿರ್ಮಾಪಕ ಮತ್ತು ನಿರ್ದೇಶಕರು ಪ್ರಮಾಣಪತ್ರವನ್ನು ನೀಡುವಲ್ಲಿ CBFC ಯಿಂದ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಕೇರಳ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಸುಮಾರು 15 ಕೋಟಿ ರೂ. ವೆಚ್ಚದ ಚಿತ್ರವನ್ನು ಓಣಂ ಬಿಡುಗಡೆಗೆ ಯೋಜಿಸಲಾಗಿತ್ತು.
ಆದರೆ ಯಾವುದೇ ವಿವರಣೆಯಿಲ್ಲದೆ ಚಿತ್ರ ಬಿಡುಗಡೆಗೆ ಅನುಮತಿಯನ್ನು ತಡೆಹಿಡಿಯಲಾಗಿದೆ ಎಂದು ನಿರ್ಮಾಪಕ ಜೂಬಿ ಥಾಮಸ್ ಮತ್ತು ನಿರ್ದೇಶಕ ಮುಹಮ್ಮದ್ ರಫೀಕ್ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಅಕ್ಟೋಬರ್ 14 ರಂದು ಮತ್ತೆ ಅರ್ಜಿ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ.
Advertisement