
ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮತ್ತು ಗಾಯಕಿ ವಾರಿಜಾಶ್ರೀ ವೇಣುಗೋಪಾಲ್ ಅವರು ಈ ತಿಂಗಳ ಕೊನೆಯಲ್ಲಿ ವಿವಾಹ ಬಂಧನಕ್ಕೊಳಗಾಗಲಿದ್ದಾರೆ.
ಬಹುಭಾಷಾ ಜಾನಪದ ಸಂಗೀತಕ್ಕೆ ಹೆಸರುವಾಸಿಯಾದ ಗಾಯಕ ರಘು ದೀಕ್ಷಿತ್ ಗ್ರ್ಯಾಮಿ-ನಾಮನಿರ್ದೇಶಿತ ಸಂಗೀತಗಾರ್ತಿ ಕೊಳಲು ವಾದಕಿ ವಾರಿಜಾಶ್ರೀ ವೇಣುಗೋಪಾಲ್ ಅವರು ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಉತ್ಸುಕರಾಗಿದ್ದಾರೆ.
ಸಂಗೀತ ಸಹಯೋಗದಿಂದ ಪ್ರೀತಿಗೆ
ಈ ಇಬ್ಬರು ಸಂಗೀತ ಕಲಾವಿದರ ಪ್ರೀತಿ ಪ್ರೇಮ ಪ್ರಣಯ 'ಸಾಕು ಇನ್ನೂ ಸಾಕು' ನಲ್ಲಿನ ಸಂಗೀತ ಸಹಯೋಗದೊಂದಿಗೆ ಪ್ರಾರಂಭವಾಯಿತು, ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಘು ದೀಕ್ಷಿತ್ ನನ್ನ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಇದೆಲ್ಲಾ ಆಕಸ್ಮಿಕವಾಗಿ ಹುಟ್ಟಿಕೊಂಡಿತು. ವಾರಿಜಾಶ್ರೀ ಅವರ ಪೋಷಕರ ಆಶೀರ್ವಾದದೊಂದಿಗೆ, ನಮ್ಮ ಜೀವನದ ಈ ಹೊಸ ಅಧ್ಯಾಯವನ್ನು ಒಟ್ಟಿಗೆ ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.
ರಘು ದೀಕ್ಷಿತ್ ಹಾಗೂ ವಾರಿಜಶ್ರೀ ವೇಣುಗೋಪಾಲ್ ಅವರು ಸಾಕಷ್ಟು ವಿಡಿಯೊ ಸಾಂಗ್ ಆಲ್ಬಂಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಅವರು ಹಾಡಿದ್ದ 'ಭರವಸೆಯ ಬದುಕು' ವಿಡಿಯೋ ಸಾಂಗ್ ಬದುಕಿನಲ್ಲಿ ಸಾಕಷ್ಟು ನೋವುಂಡವರಿಗೆ ಆತ್ಮವಿಶ್ವಾಸ ತುಂಬುವ ರೀತಿ ಇದೆ.
ಖ್ಯಾತ ನೃತ್ಯ ಕಲಾವಿದೆ ಮಯೂರಿ ಉಪಾಧ್ಯಾಯ ಅವರನ್ನು ವಿವಾಹವಾಗಿದ್ದ ರಘು ದೀಕ್ಷಿತ್ ಕೆಲವು ವರ್ಷಗಳ ಹಿಂದೆ ಭಿನ್ನಾಭಿಪ್ರಾಯ ತಲೆದೋರಿ ವಿಚ್ಛೇದನ ಪಡೆದಿದ್ದರು.
Advertisement