

NH 66 ಚಿತ್ರದ ಪಸ್ಟ್ ಲುಕ್ ಅನಾವರಣಗೊಂಡಿದೆ. ಸಿನಿಮಾದಲ್ಲಿ ನಟ ಪ್ರಮೋದ್ ಶೆಟ್ಟಿ ಪಾತ್ರದ ಬಗ್ಗೆ ಸುಳಿವು ನೀಡಲಾಗಿದೆ. ಕ್ಯಾಬ್ ಚಾಲಕನಾಗಿ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ.
ರಾಯ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಂಜುನಾಥ್ ಟಿಆರ್ ನಿರ್ಮಿಸಿ ನಿರ್ದೇಶಿಸಿರುವ NH 66 ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಶ್ರುತಿ ಹರಿಹರನ್ ಮತ್ತು ರಾಜೇಶ್ ನಟರಂಗ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಶೀರ್ಷಿಕೆ ಸೂಚಿಸುವಂತೆ, NH 66 ಒಂದು ಪ್ರಯಾಣದ ಸುತ್ತ ಸುತ್ತುತ್ತದೆ. ಮಂಗಳೂರಿನಿಂದ ಮುಂಬೈಗೆ ಸಾಗುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ದಿನದ ಅವಧಿಯಲ್ಲಿ ಬೆಳವಣಿಗೆಗಳೇ ಕಥಾವಸ್ತುವಾಗಿರುವ ಚಿತ್ರ ‘ಎನ್‌ಎಚ್ 66’.
ಚಿತ್ರವನ್ನು ನಿರ್ದೇಶಿಸುವ ಮತ್ತು ನಿರ್ಮಿಸುವ ಜೊತೆಗೆ ಮಂಜುನಾಥ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಬರೆದಿದ್ದಾರೆ. ಗುರು ರಾಘವೇಂದ್ರರ ಭಕ್ತರಾಗಿರುವ ಅವರು, ಅಂದುಕೊಂಡಂತೆ ಚಿತ್ರದ ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದಕ್ಕೆ ದೇವರ ಆಶೀರ್ವಾದ ಕಾರಣ ಎಂದು ಹೇಳಿದ್ದಾರೆ.
ಚಿತ್ರದ ತಾಂತ್ರಿಕ ತಂಡದಲ್ಲಿ ಛಾಯಾಗ್ರಾಹಕ ಸುನೀತ್ ಹಲಗೇರಿ ಮತ್ತು ಸಂಗೀತ ನಿರ್ದೇಶಕ ಸ್ವಾಮಿನಾಥನ್ ಇದ್ದಾರೆ. ಚಿತ್ರೀಕರಣ ಮತ್ತು ನಂತರದ ನಿರ್ಮಾಣ ಎರಡೂ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಬಿಡುಗಡೆಯ ಕುರಿತು ಹೆಚ್ಚಿನ ವಿವರಗಳನ್ನು ನಿರ್ದೇಶಕರು ಘೋಷಿಸುವ ನಿರೀಕ್ಷೆಯಿದೆ.