

ಕನ್ನಡ ಸೂಪರ್‌ಸ್ಟಾರ್ ಯಶ್ ಅವರ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಟೀಸರ್ ಯೂಟ್ಯೂಬ್ ನಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಅದರಲ್ಲಿರುವ ಇಂಟಿಮೇಟ್ ಕಾರ್ ಸೀನ್" ಬಗ್ಗೆ ಹಲವಾರು ದೂರುಗಳು ದಾಖಲಾಗಿವೆ.
ಜನವರಿ 8 ರಂದು ಟೀಸರ್ ಬಿಡುಗಡೆಯಾದ ನಂತರ ಯಶ್ ಜೊತೆಗೆ ಕಾಣಿಸಿಕೊಂಡ ನಟಿಯ ಗುರುತಿನ ಬಗ್ಗೆ ಊಹಾಪೋಹಗಳು ಹುಟ್ಟಿಕೊಂಡವು. ಇಂಟರ್ನೆಟ್‌ನ ಕುತೂಹಲವನ್ನು ಪೂರೈಸಲು, ನಿರ್ದೇಶಕಿ ಗೀತು ಮೋಹನ್‌ದಾಸ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ನಟಿಯ ಗುರುತನ್ನು ಬಹಿರಂಗಪಡಿಸಿದರು. ಆ ನಟಿ ಬೀಟ್ರಿಜ್ ಟೌಫೆನ್‌ಬಾಚ್ ಆಗಿದ್ದಾರೆ.
ಟೀಸರ್ ನಲ್ಲಿ ಬರುವ ಕಾರು ದೃಶ್ಯದಲ್ಲಿ ಹಸಿಬಿಸಿ ದೃಶ್ಯಗಳಿವೆ ಎಂದು ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬೀಟ್ರಿಜ್ ಬ್ರೆಜಿಲಿಯನ್ ಮಾಡೆಲ್ ಮತ್ತು ನಟಿಯಾಗಿದ್ದು, ಅವರು 2014 ರಲ್ಲಿ ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಗಾಯಕಿಯೂ ಹೌದು.
ಆಮ್ ಆದ್ಮಿ ಪಕ್ಷದ (AAP) ಮಹಿಳಾ ವಿಭಾಗವು ಟೀಸರ್ ನ್ನು ಆಕ್ಷೇಪಿಸಿ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಔಪಚಾರಿಕ ದೂರನ್ನು ಸಲ್ಲಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್‌ನಲ್ಲಿನ ದೃಶ್ಯಗಳು ಅಶ್ಲೀಲವಾಗಿವೆ ಎಂದು ಪಕ್ಷವು ತನ್ನ ದೂರಿನಲ್ಲಿ ಆರೋಪಿಸಿದೆ. ಇದು ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಯೋಗಕ್ಷೇಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಕನ್ನಡ ಸಾಂಸ್ಕೃತಿಕ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿಕೊಂಡಿದೆ.
ದೂರಿನ ನಂತರ, ಮಹಿಳಾ ಆಯೋಗವು ಸೆನ್ಸಾರ್ ಮಂಡಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಳಿದೆ.
ಟೀಸರ್ ನ್ನು ಯೂಟ್ಯೂಬ್‌ನಲ್ಲಿ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ, ಇದು ಸೆನ್ಸಾರ್ ಮಂಡಳಿ ಸಂಸ್ಥೆಯ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಮೂಲಗಳು ಸ್ಪಷ್ಟಪಡಿಸಿವೆ. ಚಲನಚಿತ್ರಗಳು ಮತ್ತು ಟ್ರೇಲರ್‌ಗಳಿಗೆ ಮಾತ್ರ ಪ್ರಮಾಣೀಕರಣ ಕಡ್ಡಾಯವಾಗಿದೆ ಎಂದು CBFC ಅಧಿಕಾರಿಗಳು ತಮಗೆ ಬಂದ ದೂರಿಗೆ ಸಂಬಂಧಪಟ್ಟಂತೆ ಹೇಳಿದ್ದಾರೆ. ಪರಿಣಾಮವಾಗಿ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಚಿತ್ರದ ಆನ್‌ಲೈನ್ ಪ್ರಚಾರದ ವಿಷಯವು CBFC ವ್ಯಾಪ್ತಿಯ ಹೊರಗೆ ಉಳಿದಿದೆ.
Advertisement