ಚಂದನವನದ ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

ಗುಜರಾತ್‌ನ ಕೆವಾಡಿಯಾದಲ್ಲಿ 2026ರ ಸೆಪ್ಟೆಂಬರ್ 22 ರಂದು ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
Anant Nag
ಹಿರಿಯ ನಟ ಅನಂತ್ ನಾಗ್
Updated on

ನವದೆಹಲಿ: ಚಂದನವನದ ಹಿರಿಯ ನಟ ಅನಂತ್‌ ನಾಗ್‌ ಅವರನ್ನು ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ಎನಿಸಿರುವ ‘ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ 2024’ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ಭಾರತೀಯ ಚಿತ್ರರಂಗದಲ್ಲಿ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಸಲ್ಲಿಸಿರುವ ಅನುಪಮ ಕೊಡುಗೆಯನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್ 22 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಈ ಕುರಿತು ಭಾರತೀಯ ವಾರ್ತಾಶಾಖೆ ಪಿಐಬಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ, ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಹಾಗೂ ಹಲವಾರು ತಲೆಮಾರುಗಳಿಗೆ ಸ್ಫೂರ್ತಿಯಾಗಿರುವ ಅವರ ಅದ್ಭುತ ಸಿನಿಮಾ ಪಯಣಕ್ಕಾಗಿ ನಟ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ 2024' ಅನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿರುವುದಾಗಿ ತಿಳಿಸಿದೆ.

ಸೆಪ್ಟೆಂಬರ್ 22 ರಂದು ಪ್ರಶಸ್ತಿ ಪ್ರದಾನ: ಗುಜರಾತ್‌ನ ಕೆವಾಡಿಯಾದಲ್ಲಿ 2026ರ ಸೆಪ್ಟೆಂಬರ್ 22 ರಂದು ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ: ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅನಂತ್ ನಾಗ್ ಅವರನ್ನು ಅಭಿನಂದಿಸಿದ್ದಾರೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ದಿಗ್ಗಜ ನಟ ಅನಂತ್ ನಾಗ್ ಅವರಿಗೆ ಅಭಿನಂದನೆಗಳು. ದಶಕಗಳ ಕಾಲ ಅವರ ಸಹಜ ಅಭಿನಯ, ಅದ್ಭುತ ಬಹುಮುಖಿ ಪ್ರತಿಭೆ ಮತ್ತು ಚಾತುರ್ಯವು ಭಾರತೀಯ ಚಿತ್ರರಂಗದ ಮೇಲೆ, ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗದ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ. ಅವರು ನಿರ್ವಹಿಸಿದ ಪ್ರತಿಯೊಂದು ಪಾತ್ರಕ್ಕೂ ನೈಜತೆಯನ್ನು ತಂದಿದ್ದಾರೆ. ನಿಜಕ್ಕೂ ಅತ್ಯುನ್ನತ ಕಲಾವಿದರೊಬ್ಬರಿಗೆ ಸಂದ ಅತ್ಯಂತ ಸೂಕ್ತವಾದ ಗೌರವವಿದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ಮತ್ತು ಸಂತಸದ ಕ್ಷಣ: ಅನಂತ್ ನಾಗ್ ಅವರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದು, ಇದು ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ಹಾಗೂ ಸಂತಸದ ಕ್ಷಣ ಎಂದಿದ್ದಾರೆ.

ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ:

ಸೆಪ್ಟೆಂಬರ್ 4, 1948 ರಂದು ಜನಿಸಿದ ಅನಂತ ನಾಗ್ (ಮೂಲ ಹೆಸರು ಅನಂತ ನಾಗರಕಟ್ಟೆ), ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 250ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳು ಸೇರಿದಂತೆ ಒಟ್ಟು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ಅಭಿನಯಿಸಿರುವ ಸಿನಿಮಾಗಳಲ್ಲಿ ಹಿಂದಿ, ತೆಲುಗು, ತಮಿಳು, ಮರಾಠಿ, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಯ ಚಿತ್ರಗಳೂ ಸೇರಿವೆ.

ಐದು ಬಾರಿ ರಾಜ್ಯ ಪ್ರಶಸ್ತಿ:

ಚಲನಚಿತ್ರಗಳಲ್ಲದೆ ಕಿರುತೆರೆ, ರಂಗಭೂಮಿಯಲ್ಲೂ ಅನಂತ್ ನಾಗರ್ ಹೆಸರುವಾಸಿಯಾಗಿದ್ದಾರೆ. ಖ್ಯಾತ ಲೇಖಕ ಆರ್.ಕೆ. ನಾರಾಯಣ್ ಅವರ ಕಥೆಗಳನ್ನು ಆಧರಿಸಿದ ಜನಪ್ರಿಯ ದೂರದರ್ಶನ ಧಾರಾವಾಹಿ 'ಮಾಲ್ಗುಡಿ ಡೇಸ್'ನಲ್ಲಿ ಅವರು ನಟಿಸಿದ್ದಾರೆ. ಈ ಹಿರಿಯ ನಟ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಐದು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.

ಪದ್ಮಭೂಷಣ ಪ್ರಶಸ್ತಿ

2025ರಲ್ಲಿ ಕೇಂದ್ರ ಸರ್ಕಾರ ಅನಂತ ನಾಗ್ ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮಭೂಷಣ'ವನ್ನು ನೀಡಿ ಗೌರವಿಸಿತು.

Anant Nag
ನಟ ಅನಂತ್ ನಾಗ್ ಗೆ ಪದ್ಮ ಪ್ರಶಸ್ತಿ ಪ್ರದಾನ

ಡಾ. ರಾಜ್ ಕುಮಾರ್ ಬಳಿಕ ಇದೀಗ ಕನ್ನಡದ ಮತ್ತೋರ್ವ ನಟನಿಗೆ ಪ್ರತಿಷ್ಠಿತ ಪ್ರಶಸ್ತಿ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವೆಂದು ಪರಿಗಣಿಸಲಾಗುತ್ತದೆ ಮತ್ತು ಭಾರತೀಯ ಚಿತ್ರರಂಗದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ವ್ಯಕ್ತಿಯೊಬ್ಬರಿಗೆ ಇದನ್ನು ನೀಡಲಾಗುತ್ತದೆ. ಸುಮಾರು 30 ವರ್ಷಗಳ ನಂತರ ಡಾ. ರಾಜ್ ಕುಮಾರ್ ನಂತರ ಇದೀಗ ಕನ್ನಡಕ್ಕೆ ಈ ಪ್ರಶಸ್ತಿ ಒಲಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com