ಭೂತದ ಬಾಯಲ್ಲಿನ ಭಗವದ್ಗೀತೆ

ಭೂತದ ಬಾಯಲ್ಲಿನ ಭಗವದ್ಗೀತೆ
Updated on: 

ಅದು ಈ ಜನರೇಶನ್ನಿನ ದೆವ್ವ. ಉಲ್ಟಾ ಪಾದಗಳಿಲ್ಲ. ಉಢಾಫೆಯ ಉದ್ಧಟತನವಿಲ್ಲ. ಕಾಯ ವಿಕಾರವಲ್ಲ. ಕಾಮನ್ಸೆನ್ಸನ್ನು ಫಾಲೋ ಮಾಡುವಂಥದ್ದು. ನೆನೆದರೆ ಧಿಗ್ಗನೆ ದರ್ಶನ. ಸಾವಿನ ವೃತ್ತಾಂತ ತೆರೆದಿಟ್ಟು, ನಾಯಕನನ್ನು ನಂಬಿಸುತ್ತದೆ. ಅದು ತನ್ನ ಮುಕ್ತಿಗೆ ಬಯಸುವುದು ನಾಯಕನ ಸ್ನೇಹವನ್ನು. ಮನೋರೋಗಿಯಾಗಿ ಮಾಸಿದ ಮದರಂಗಿಯಾದ ತನ್ನ ಪ್ರೇಯಸಿಯಲ್ಲಿ ಈ ಸ್ನೇಹದ ಮೂಲಕ ಮಂದಹಾಸ ಚಿಮ್ಮಿಸುವ ದೆವ್ವದ ಯತ್ನವೇ 'ಮಂದಹಾಸ' ಕಥೆಯ ಓಟ.
ಹಾರರ್ ಸಿನಿಮಾದ ಸಂವಿಧಾನಗಳಾಚೆ ಎಗರಿ, ಪ್ರಯೋಗಕ್ಕೊಡ್ಡಿಕೊಂಡ ಚಿತ್ರವಿದು. ದೆವ್ವವನ್ನು ಪಾಸಿಟಿವ್ ಆಗಿ ತೋರಿಸಿ, ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಿರುವ ಧಾಟಿಯಲ್ಲಿ ಧಮ್ಮಿದೆ. ಆದರೆ, ಮೊದಲರ್ಧದಲ್ಲಿ ಕಥೆ ಟೇಕ್ಆಫ್ ಆಗುವವರೆಗೂ ಒಂದು ತಿರುವೂ ಕಾಣಿಸದು. ಸಂಗೀತಮಯ ಚಿತ್ರದ ವೀಕ್ನೆಸ್ಸೇ ಇಲ್ಲೂ ಅಪ್ಪಳಿಸಿ, ಪ್ರೇಕ್ಷಕನ ತಾಳ್ಮೆ ಹಿಂಡುವ ಕೆಲಸ ಮಾಡುತ್ತದೆ. ಚಿತ್ರ ಲವಲವಿಕೆಗೊಡ್ಡಿಕೊಳ್ಳುವುದು ಮಧ್ಯಂತರದ ನಂತರ.
ನಾಯಕಿ ಅಂಜಲಿಗೆ ಸಂಗೀತವೇ ಸರ್ವಸ್ವ. ಆಲಾಪಗಳನ್ನು ಅರಳಿಸಿಕೊಳ್ಳಲು ನಿರ್ಮಲ ಪರಿಸರಕ್ಕೆ ಹಾತೊರೆದು ಅಪ್ಪನೊಂದಿಗೆ ರೆಸಾರ್ಟಿಗೆ ಬರುತ್ತಾಳೆ. ಅಲ್ಲಿ ಡ್ಯಾನ್ಸರ್ ಮೋಹನ್ನ ಮೊದಲ ನೋಟಕ್ಕೇ ಕರಗುತ್ತಾಳೆ. ಪ್ರೈವೇಟ್ ಕ್ಲಾಸಿನಲ್ಲಿ ತನಗೂ ಡ್ಯಾನ್ಸ್ ಹೇಳಿಕೊಡಲು ಕೇಳಿಕೊಳ್ಳುತ್ತಾಳೆ. ಕ್ಲಾಸಿನಲ್ಲಿ ಶುರುವಾಗುವ ಅನುರಾಗ, ಅಂತಿಮವಾಗಿ ಅಪ್ಪನ ಅಪ್ಪಣೆ ಗಿಟ್ಟಿಸಿಕೊಳ್ಳುತ್ತದೆ. ಈ ವೇಳೆ ರೋಹನ್ ಅಪಘಾತಕ್ಕೀಡಾಗಿ ಸತ್ತಾಗ, ಅಂಜಲಿ ಮನೋರೋಗಿಯಾಗುತ್ತಾಳೆ. ಅಂಜಲಿಯ ಚೇತರಿಕೆ ಅದೇ ರೆಸಾರ್ಟಿನ ಪರಿಸರದಲ್ಲಿ ಸಾಧ್ಯವಾಗಬಹುದೆಂದು ವೈದ್ಯರೂ ಹೇಳಿದಾಗ ಅಪ್ಪ- ಮಗಳ ವಾಸ ತಾತ್ಕಾಲಿಕ ಅಲ್ಲೇ.
ಆಗಷ್ಟೇ ರೆಸಾರ್ಟಿಗೆ ಬಂದ ಆದಿತ್ಯನಿಗೆ ಇಷ್ಟೆಲ್ಲ ಕಥೆ ಹೇಳುವುದು ಅಂತರ್ಪಿಶಾಚಿಯಾದ ರೋಹನ್. ಮುಂದೆ ಆದಿತ್ಯನೂ ನೃತ್ಯದ ಮೋಡಿ ಬೀರಿ ಅಂಜಲಿಯನ್ನು ಸಹಜ ಸ್ಥಿತಿಗೆ ತರುತ್ತಾನೆ. ಅವರಿಬ್ಬರ ನಡುವೆ ಅನುರಾಗದ ಎರಡನೇ ಅಧ್ಯಾಯ. ನಿಜಕ್ಕೂ ರೋಹನ್ನನ್ನು ತಾನೇ ಆಕ್ಸಿಡೆಂಟ್ ಮಾಡಿ ಕೊಂದಿದ್ದು ಎಂದು ಆದಿತ್ಯ ಹೇಳಿದಾಗ ಅಂಜಲಿ ಅಸಮಾಧಾನಿಯಾಗಿ ರೆಸಾರ್ಟ್ ಬಿಟ್ಟು ನಡೆಯುತ್ತಾಳೆ. ಆದಿತ್ಯ ಹುಚ್ಚನಾಗಿ ಅಲ್ಲೇ ಅಲೆಯುವ ಸನ್ನಿವೇಶದೊಂದಿಗೆ ಚಿತ್ರದ ದುಃಖಾಂತ್ಯ.
ಆರಂಭದಲ್ಲಿ ಪ್ರೇತಾತ್ಮದ ಪಾತ್ರ ಸಸ್ಪೆನ್ಸಾಗಿಟ್ಟು, ಅಂತ್ಯದಲ್ಲಿ ಮಂದಹಾಸ ಮೂಡಿಸಿ ವಿಲಕ್ಷಣಗೊಳಿಸಿರುವ ನಿರ್ದೇಶಕ ರಾಜೇಶ್ ಕೆ. ನಾಯರ್ ಈ ಎರಡು ಅಂಶಗಳಲ್ಲೇ ಗೆದ್ದುಬಿಟ್ಟರು. ಸಂಭಾಷಣೆಯನ್ನು ಮಾಗಿಸುವ ಅಗತ್ಯವಿತ್ತು. ರೋಹನ್ ಪಾತ್ರದ ಮೂಲಕ ನಟನಾದ ಚೇತನ್ಗೆ 'ಸೈಲೆಂಟ್ ಸ್ಟಾರ್'ಗಿರಿ ಕೊಟ್ಟು ಸ್ವಾಗತಿಸಬಹುದು. ಆದಿತ್ಯನಾದ 'ಜೋಶ್' ರಾಕೇಶ್ ಅಡಿಗರದ್ದು ಅದೇ ರಾಕೆಟ್ ಉತ್ಸಾಹ. ಮಂದಹಾಸದ ಮೊಗ ಅರಳಿಸಿ ಆವರಿಸಿಕೊಳ್ಳುತ್ತಾರೆ. ಅಂಜಲಿಯಾದ ನಿಕ್ಕಿ ದಾಸ್ರ ನಟನೆಯ ಹಾರಾಟ, ಇದವರ ಮೊದಲ ಚಿತ್ರ ಎಂದು ಸರ್ಟಿಫಿಕೇಟ್ ಕೊಡಲು ಸಾಕು. ಶ್ರೀನಾಥ್, ವಿಜಯಸಾರಥಿ ಉತ್ತಮವಾಗಿಯೇ ಪೋಷಕ ಸಾರಥ್ಯ ವಹಿಸಿದ್ದಾರೆ. ದುಃಖದಲ್ಲೂ ನಗುವಿನ ಅರ್ಥ ಹುಡುಕಿ ಹೇಳುವ 'ಮಿತ್ರ' ಅವರು ಇಲ್ಲಿ ಆಪ್ತಮಿತ್ರ. ಚಿತ್ರದಲ್ಲಿ ಪ್ರೇಕ್ಷಕನ ಬೇಸರವನ್ನು ಹೊಡೆದೋಡಿಸುವ ಹೊಣೆ ಹೊತ್ತ ವಿದೂಷಕ. ಸಂಗೀತ ನಿರ್ದೇಶಕ ವೀರ್ ಸಮರ್ಥ್ರನ್ನು ಸಮರ್ಥಿಸಿಕೊಳ್ಳುವ ಹಾಡುಗಳಲ್ಲಿ ನವಿರುತನ ತೆಳುವಾಗಿ ಇಣುಕಿದೆ. ಹೊಸಲೋಕದ ದೃಷ್ಟಿ ಕೊಟ್ಟ ಸಂತೋಷ್ ರೈ ಪಾತಾಜೆಯವರ ಕ್ಯಾಮೆರಾಕ್ಕೆ ಹಾರ ಹಾಕೋಣ.


- ಕೀರ್ತಿ ಕೋಲ್ಗಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com