'ಪ್ರೇಮ್‌' 'ಚಂದ್ರ'ಮನ ಚಾರ್ಮ್ ಮಿನಾರ್

'ಪ್ರೇಮ್‌' 'ಚಂದ್ರ'ಮನ ಚಾರ್ಮ್ ಮಿನಾರ್
Updated on

ಇದು ನಿಮ್ಮ ಕಥೆಯೇ ಆಗಿದ್ದರೆ ನನ್ನ ಮೇಲೆ ಇದು 'ಚೋರ್‌ಮಿನಾರ್‌' ಎಂದು ಕೇಸು ಹಾಕಬೇಡಿ ಎಂಬ ಎಚ್ಚರಿಕೆ ನೀಡಿದ್ದ ನಿರ್ದೇಶಕ ಚಂದ್ರು 'ಚಾರ್‌ಮಿನಾರ್‌' ಎಂಬ 'ತಾಜಾಮಹಲಿ'ನೊಂದಿಗೆ ಬಂದಿದ್ದಾರೆ. ಇದು ಅಲ್ಲಿಂದ ಇಲ್ಲಿಂದ ಕದ್ದು ತಂದ ಚೋರ್‌ಬಜಾರ್‌ನ ಚಿತ್ರ ಅಲ್ಲ. ನಿರ್ದೇಶಕ ಚಂದ್ರು ತಾವೇ ಮುಂದೆ ನಿಂತು ಕಟ್ಟಿಸಿದ ಚಾರ್‌ಮಿನಾರ್ ಇದು. ನಾಲ್ಕು ಕಂಬನಿಗಳ ಕಹಾನಿಯನ್ನಿಟ್ಟುಕೊಂಡು ನಾಲ್ಕು ಜನ ಮೆಚ್ಚುವಂಥ ಸಿನಿಮಾ ಮಾಡಿದ್ದಾರೆ ಚಂದ್ರು.  ಹೆತ್ತವರು, ಸ್ನೇಹಿತರು, ಗುರುಗಳು ಮತ್ತು ಒಂದು ಹೆಣ್ಣು ಎಲ್ಲರ ಜೀವನದ ಅತಿ ಪ್ರಮುಖವಾದ ನಾಲ್ಕು ಕಂಬಗಳು ಎನ್ನುವ ಚಿತ್ರದಲ್ಲಿ 'ಎಲ್ಲಿದೆಯೋ ಕಥೆ' ಎನ್ನುತ್ತಾ, 'ಈ ಕಂಬದಲ್ಲಿರುವುದೇ, ಅಲ್ಲಿ, ಆ ಕಂಬದಲ್ಲಿರುವುದೇ' ಎಂದು ಹುಡುಕಬೇಕಿಲ್ಲ. ಅದು ಎಲ್ಲೆಲ್ಲಿಯೂ ಇದೆ. ಎಲ್ಲ ಕಂಬಗಳೂ ಕತೆಯಲ್ಲಿ ಮೇಳೈಸಿರುವುದರಿಂದ ಇದೊಂಥರಾ ಕಂಬ ಮೇಳ ಎನ್ನಬಹುದು.

ಚಿತ್ರಕಥೆಯಲ್ಲೂ ಕೂಡಾ, ಈ ನಾಲ್ಕು ಪಿಲ್ಲರ್‌ಗಳೇ ಜೀವಾಳ. ಅದು ಬಿಟ್ಟು ಬೇರೆ ಫಿಲ್ಲರ್‌ಗಳಿಲ್ಲ. ಚಾರ್‌ಮಿನಾರ್‌ನ ಕತೆಯಲ್ಲಿ ನಾಲ್ಕು ಕಂಬಗಳಿವೆ ನಿಜ. ಆದರೆ, ಅದರ ಜೊತೆಗೆ ಮನೆ, ಶಾಲೆ ಆಫೀಸುಗಳ, ನಾಲ್ಕು  ಗೋಡೆಗಳ ಮಧ್ಯೆ ನಡೆಯುವ ಕಥೆಯೂ ಇದೆ. ಆದರೆ ಪ್ರೀತಿ ಪ್ರೇಮಕ್ಕೆ ಮಾತ್ರ ಇಲ್ಲಿ ಓಪನ್ ಸ್ಪೇಸ್. ಹಾಗಾಗಿ, ನಾಲ್ಕು  ಕಂಬಗಳ ಕಥೆ ಇದ್ದರೂ ಪ್ರೇಮ್ ಮೇಘನಾ ಕಾಂಬಿನೇಶನ್‌ಗೆ ಹೆಚ್ಚು ಒತ್ತು, ಹೆಚ್ಚು ಹೊತ್ತು.
ಬಹಳ ದಿನಗಳಿಂದ ನಾಟ್ ರೀಚಬಲ್ ಆಗಿದ್ದ ಗೆಳತಿಯನ್ನು 'ಮತ್ತೆ ಬನ್ನಿ ಪ್ರೀತ್ಸೋಣ' ಎನ್ನುವ ಕತೆ, ಕನ್ನಡ ಪ್ರೇಕ್ಷಕರಿಗೆ ಸುಲಭವಾಗಿ ರೀಚ್ ಆಗುವಂಥದ್ದು. ಹಳ್ಳಿ ಹುಡುಗನ ಆತ್ಮಕಥೆಯಲ್ಲಿ ಬಂದು ಹೋಗುವ ಚಿಕ್ಕಪುಟ್ಟ ಘಟನೆಗಳನ್ನೂ ಸಹ ಪ್ರೀತಿಯಿಂದ ಹೆಕ್ಕಿ, ಚಂದ್ರು ಚಿತ್ರಕಥೆ ಹೆಣೆದಿದ್ದಾರೆ.

ಅಪ್ಪ, ಅಮ್ಮ, ಸ್ನೇಹಿತರು, ಗುರುಗಳ ಕತೆ ಹೇಳುವ ನಾಯಕ, ಹಳೆಯ ಸ್ನೇಹಿತರನ್ನು ತಾವು ಕಲಿತ ಶಾಲೆಯಲ್ಲಿ ಮತ್ತೆ ಭೇಟಿಯಾಗುವ ನೆಪದಲ್ಲಿ ತನ್ನ ಬಾಲ್ಯದ ಗೆಳತಿಯನ್ನು ನೆನಪಿಸಿಕೊಳ್ಳುತ್ತಾನೆ. ಬಾಲ್ಯದಲ್ಲಿ ಕದ್ದು ಸಿನಿಮಾ ನೋಡಲು ಹೋಗಿದ್ದು, ಮೇಷ್ಟ್ರು ಕೇಳುವ ಪ್ರಶ್ನೆಗಳಿಗೆ ಹೆದರಿ ಬೆಂಚಿನ ಹಿಂದೆ ಅಡಗಿ ಕೂತಿದ್ದು, ಮನೆಯಲ್ಲಿ ಹಣ ಕದ್ದು ಹುಡುಗಿಗೆ 'ಕಲಂ' ಕೊಡಿಸಿದ್ದು, ದೊಡ್ಡವಳಾದ ಮೇಲೆ ಅವಳು ಇವನಿಗೆ ಅಬ್ದುಲ್ ಕಲಾಂರ ಪುಸ್ತಕ ಕೊಡಿಸಿದ್ದು, ಕುರಿ ಕಾಯುವವನ ಮಗ, ತಾನು ಪ್ರೀತಿಸಿದ ಹುಡುಗಿ ತನಗೆ ಅಮ್ಮ ಮಾತ್ರ ಮುಖ್ಯ ಎಂದಾಗ ತಾನು ಬಕ್ರಾ ಆದೆ ಎಂದುಕೊಂಡಿದ್ದು, ಮುಂದೆ ಸಾಧನೆಯ ಹಾದಿಯಲ್ಲಿ ಅಮೆರಿಕಾದಲ್ಲಿ ನೆಲೆ ಕಂಡುಕೊಂಡಿದ್ದು, ಹೀಗೆ ಘಟನೆಗಳ ಲೆಕ್ಕದಲ್ಲೇ ಚಿತ್ರವನ್ನೂ ತೂಗಿಸಿಕೊಂಡು ಹೋಗಿರುವ ಚಂದ್ರು ಕೊನೆಯವರೆಗೂ ಚಿತ್ರದಲ್ಲಿ ಪ್ರಾಮಾಣಿಕತೆ ಕಾಯ್ದುಕೊಂಡಿದ್ದಾರೆ. ಆದರೆ, ಇಡೀ ಚಾರ್‌ಮಿನಾರ್‌ನ ಗೋಪುರಕ್ಕೆ ಕಳಶವಿಟ್ಟಂತಿರುವುದು ಚಿತ್ರದ ಕ್ಲೈಮ್ಯಾಕ್ಸ್. 'ಒಮ್ಮೆ ನೋವು, ಒಮ್ಮೆ ನಲಿವು, ಜೀವನ ಏರುಪೇರಿನ ಗಾಯನ' ಎನ್ನುವುದನ್ನು ಕ್ಲೈಮ್ಯಾಕ್ಸ್‌ನ ಒಂದೇ ದೃಶ್ಯ ಹೇಳಿಬಿಡುತ್ತದೆ. ಚಿತ್ರದುದ್ದಕ್ಕೂ ಪ್ರೇಕ್ಷಕನ ಕಣ್ಣಲ್ಲಿ, ಅಲ್ಲಲ್ಲಿ ಚದುರಿದಂತೆ 'ಮಳೆಯಾದಂತೆನಿಸಿದರೂ', ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ ಮುಂಗಾರುಮಳೆಯೇ ಸುರಿಯುತ್ತದೆ.
ಚಿತ್ರದ ಹೆಸರು 'ಚಾರ್‌ಮಿನಾರ್‌' ಆದರೂ ಇದನ್ನು ಚಂದ್ರು ಶೈಲಿಯಲ್ಲಿ 'ಪ್ರೇಮ್ ಕಹಾನಿ' ಎನ್ನಬಹುದು ಎನ್ನುವಂಥ ಅಭಿನಯ ನಾಯಕ ಪ್ರೇಮ್‌ರದ್ದು. ಹುಡುಗಾಟದ ಹುಡುಗನಿಂದ ಹಿಡಿದು, ಜವಾಬ್ದಾರಿಯುತ ನಾಗರಿಕನಾಗುವವರೆಗೆ ಪ್ರೇಮ್, ಚಿತ್ರದ ನಾಲ್ಕೂ ಕಂಬಗಳಿಗೆ, ಆಸರೆಯಾಗಿದ್ದಾರೆ. ಈ ಚಿತ್ರದಿಂದ ಪ್ರೇಮ್‌ಗೆ ಅತಿ ಅಗತ್ಯವಾಗಿದ್ದ ಬ್ರೇಕ್ ಸಿಕ್ಕಿದೆ ಎನಿಸಿದರೆ ತಪ್ಪಿಲ್ಲ. ಕಂಬದ ಮ್ಯಾಲಿನ ಗೊಂಬಿ ಮೇಘನಾ ಗಾಂವ್ಕರ್ ಆರಂಭದಲ್ಲಿ ಹರಿವ ನದಿ. ಅಂತ್ಯದಲ್ಲಿ ಅಬ್ಬರದ ನಂತರ ಶಾಂತವಾಗುವ ಕಡಲು. ನಾಯಕನ ಗೆಳೆಯ ಮತ್ತು ಇತರ ಚಿಕ್ಕಪುಟ್ಟ ಪಾತ್ರಗಳ, ಮಾತು ಕತೆ ಅಭಿನಯದಲ್ಲಿ ಅಸಹಜತೆ ಕಾಣಿಸುತ್ತದೆ ಎನ್ನುವುದು ಚಿತ್ರದಲ್ಲಿ ಅತಿ ವಿರಳ ಎನ್ನಬಹುದಾದ ದೌರ್ಬಲ್ಯಗಳಲ್ಲೊಂದು. ಅಕ್ಕಿ ಕಾಳಿನಷ್ಟು ಸಣ್ಣ ಪಾತ್ರವಾದರೂ ಗೌರೀಶ್ ಅಕ್ಕಿ ಅವರದ್ದು ಹದವಾದ ಅಭಿನಯ.
ಸಂಗೀತ ನಿರ್ದೇಶಕ ಹರಿಗಾನ, ಲೋಕೇಶ್‌ಕೃಷ್ಣರ ಸಾಹಿತ್ಯ ಸೇರಿ ಬಹಳ ದಿನ ಕಿವಿಯಲ್ಲಿ ಉಳಿಯುವಂಥ ಹಾಡುಗಳು 'ಚಾರ್‌ಮಿನಾರ್‌'ಗೆ ಬುನಾದಿಯಾಗಿವೆ. ಚಂದ್ರಶೇಖರ್ ಕ್ಯಾಮೆರಾದಲ್ಲಿ ಮಿನಾರ್‌ನ ಸೌಂದರ್ಯ ಹೊಳೆಯುತ್ತದೆ.
ಇದು ಪಿಜ್ಜಾ ಬರ್ಗರ್, ಕಾಫಿ ಡೇ ಹುಡುಗ ಹುಡುಗಿಯರಿಗೆ ಹಿಡಿಸಬಹುದಾದ ಮೆನು ಅಲ್ಲದಿರಬಹುದು. ಆದರೆ, ಚಂದ್ರು ಚಿತ್ರಗಳೆಂದರೆ ಅಲ್ಲಿ ಅಮಾಯಕ ಪ್ರೀತಿಗೆ ಹೆಚ್ಚು ಜಾಗ. ಹಾಗಾಗಿ, ಚಾರ್‌ಮಿನಾರ್ ಚಿತ್ರದ್ದೂ ಕೂಡ 'ಚಾರ್ ದಿನ್ ಕ ಪ್ಯಾರ್‌' ಅಲ್ಲ. 'ಕೃಷ್ಣನ್ ಲವ್‌ಸ್ಟೋರಿ', 'ಚೆಲುವಿನ ಚಿತ್ತಾರ', 'ಸಂಜು ವೆಡ್ಸ್ ಗೀತಾ' ಚಿತ್ರಗಳನ್ನು ಇಷ್ಟಪಟ್ಟವರಿಗೆ ಚಾರ್‌ಮಿನಾರ್ ಖಂಡಿತಾ ಚಾರ್ಮಿಂಗ್ ಎನಿಸುತ್ತದೆ. ಇದು ಮುಗ್ಧ ಪ್ರೇಮಿಗಳ ಪಾಲಿನ 'ಪ್ರೀಮಿಯರ್ ಶೋ'.
- ಹರಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com