

'ಲಕ್ಷ್ಮೀ' ಚಿತ್ರದಿಂದ ಶಿವರಾಜ್ಕುಮಾರ್ ಮತ್ತು ಪ್ರಿಯಾಮಣಿ 'ಬೆಸ್ಟ್ ಆನ್ಸ್ಕ್ರೀನ್ ಪೇರ್' ಎನಿಸಿಕೊಳ್ಳಬಹುದು. ಆದರೆ ಚಿತ್ರದಲ್ಲಿ ಈ ಪೇರ್ಗಿಂತ ಹೆಚ್ಚು ಗಮನಸೆಳೆಯುವುದು ಶಿವರಾಜ್ಕುಮಾರ್ ಅವರೊಳಗಿನ ಫೈರ್. ಹೀರೋಗಳನ್ನು ಮೆರೆಸುವ ಚಿತ್ರಗಳ ಬಗ್ಗೆ ಅವರಿಗಿರುವ ಫ್ಲೇರ್. ವಿಲನ್ಗಳನ್ನು ಫೇಸ್ ಮಾಡುವ ಸ್ಟೈಲ್ನಲ್ಲಿ ಬಳಸಿಕೊಳ್ಳಲಾಗಿರುವ ಅವರ ಫೇಸ್ವ್ಯಾಲ್ಯೂ.
ಆದರೆ ಇದರ ನಡುವೆಯೂ ಲಕ್ಷ್ಮೀ ಚಿತ್ರದಲ್ಲಿ 'ಲ್ಯಾಕ್ಸ್ ಮಿ' ಎನ್ನುವುದು 'ಪರಿಪೂರ್ಣತೆ'. ಒಂದು ಇಂಟರೆಸ್ಟಿಂಗ್ ಎಪಿಸೋಡ್ನಿಂದ ಶುರುವಾಗುವ ಚಿತ್ರದ ಪಾಸಿಟಿವ್ ಅಂಶ ಎಂದರೆ ಮುಂದಿನ ಕುತೂಹಲ ಉಳಿಸಿಕೊಳ್ಳುವ ಕಥೆ, ಆದರೆ ಅಲ್ಲಲ್ಲಿ ಅನಗತ್ಯ ದೃಶ್ಯಗಳು, ಲಂಗುಲಗಾಮಿಲ್ಲದ ರಂಗಾಯಣ ರಘು ಅವರ ಪಾತ್ರ, ಅನಗತ್ಯ ಸೆಂಟಿಮೆಂಟು, ಚಿತ್ರದ ಕೆಲವೊಂದು ಕೊರತೆಗಳು.
ಶ್ರೀರಾಮನಂಥ ಗಂಡ, ಸೀತಾದೇವಿಯಂಥ ಹೆಂಡತಿ. ಅವಳಿಗೆ ರಾವಣನಂಥವನ ಜೊತೆ ಓಡಿ ಹೋದಳು ಎಂಬ ಅಪವಾದ, ಲೋಕನಿಂದನೆ. ಸಾಗರದಾಚೆಯ ನಾಡಿಗೆ ಹೆಂಡತಿಯನ್ನು ಹುಡುಕಿಕೊಂಡು ಹೋಗುವ ಗಂಡ, ರಂಗಾಯಣ ರಘು ಎಂಬ ಆಂಜನೇಯನ ಅವತಾರ, ಕೆಟ್ಟವರ ಮೇಲೆ ಮುಗಿಬೀಳುವ ಒನ್ ಅಂಡ್ ಓನ್ಲೀ 'ಶಿವ'ಸೈನ್ಯ, ಕೊನೆಗೆ ದುಷ್ಟಸಂಹಾರವಾಗುವ 'ರಾಮಾಯಣ' 'ಲಕ್ಷ್ಮೀ' ಚಿತ್ರದ್ದು.
ಚಿತ್ರದ ಚಿತ್ರಕಥೆಯಲ್ಲಿ ಸಾಕಷ್ಟು ಬೆವರು ಹರಿಸಿರುವ ನಿರ್ದೇಶಕ ರಾಘವ್ಲೋಕಿ ನೋಡುಗರನ್ನು ಸೀಟಿಗೆ ಅಂಟಿಸುವ ಕೆಲಸ ಮಾಡಿದ್ದಾರೆ. ಆದರೆ, ಅನಪೇಕ್ಷಿತ ಅತಿಥಿಗಳಂತೆ ಬರುವ ಕೆಲವು ದೃಶ್ಯಗಳನ್ನು ಕತ್ತರಿಸಿ ಬಿಸಾಕುವಲ್ಲಿ ಮಾತ್ರ ಸಂಕೋಚ ಪಟ್ಟುಕೊಂಡಿದ್ದಾರೆ. ಆದರೂ ಶಿವರಾಜ್ಕುಮಾರ್ ಅಭಿನಯ, ಥೇಟ್ ಅವರ ಹೇರ್ಸ್ಟೈಲ್ನಂತೆಯೇ ಮತ್ತೆ ಮತ್ತೆ ಬದಲಾಗುವ ಕಥೆಯ ಹೂರಣ, ಪ್ರಿಯಾಮಣಿಯ ಗಾಂಭೀರ್ಯ, ನೋಡುಗರನ್ನು ಕಾಡುವ ಹಲವು ದ್ವಂದ್ವಗಳು, ಗುರುಕಿರಣ್ ಹಾಡುಗಳು, ಚಿತ್ರದ ಅದ್ದೂರಿ ಮೇಕಿಂಗ್ ಎಲ್ಲವೂ ಚಿತ್ರಕ್ಕೆ ವರದಾನವಾಗಿದೆ. ಆರಂಭದ ದೃಶ್ಯದಲ್ಲಿ ಅಂತರಾಷ್ಟ್ರೀಯ ನೃತ್ಯಗಾರ್ತಿಯೊಬ್ಬಳ ನಿಜರೂಪವನ್ನು ಬಯಲು ಮಾಡುವ ಶಿವರಾಜ್ಕುಮಾರ್ ನಂತರ ಇಡೀ ಚಿತ್ರವನ್ನು ತಮ್ಮಿಷ್ಟಕ್ಕೆ ತಕ್ಕಂತೆ ಕುಣಿಸುತ್ತಾರೆ. ಅಭಿಮಾನಿಗಳಿಗಂತೂ ಹಾಡು, ಫೈಟು ಎಲ್ಲದರಲ್ಲೂ 100 ಪರ್ಸೆಂಟ್ ತೃಪ್ತಿ ನೀಡಿದ್ದಾರೆ ಅವರು. ಆದರೆ, ಚಿತ್ರದಲ್ಲಿ ಮನರಂಜನೆ ಕೊಡುವ ಅಂಶಗಳಿದ್ದರೂ 'ನೋಡೋಣ, ಒಂದು ಸಣ್ಣ ಬ್ರೇಕ್ನ ನಂತರ' ಎನ್ನುವಂಥ ದೃಶ್ಯಗಳು, ಚಿತ್ರದ ಸರಾಗ ಓಟಕ್ಕೆ ತಡೆ ಹಾಕಿವೆ. 'ತುಂಬಾ ಸಾಣೆ ಹಿಡಿದ್ರೆ ಚಾಕು ಇರಲ್ಲ ಹ್ಯಾಂಡಲ್ ಇರ್ತದೆ' ಎನ್ನುವಂತೆ ಎಂ.ಎಸ್.ರಮೇಶ್ ಸಂಭಾಷಣೆ ಈ ಬಾರಿ ಅಷ್ಟೊಂದು ಕಿಕ್ ಕೊಡುವುದಿಲ್ಲ. ರಂಗಾಯಣ ರಘು ಪಾತ್ರಕ್ಕಂತೂ ಅವರು ಸಂಭಾಷಣೆ ಬರೆದಿರುವುದೇ ಡೌಟು. ಇದರ ಜೊತೆಗೆ, ಶಿವರಾಜ್ಕುಮಾರ್ ಮತ್ತದೇ ಆ್ಯಕ್ಷನ್ ಮತ್ತು ಹೀರೋಯಿಸಂಗೇ ಜೋತುಬಿದ್ದಿರುವುದು ಕೂಡ ಕೊಂಚ ನಿರಾಸೆಯ ವಿಷಯವೇ.
ವಿಶಿಷ್ಟ ಪಾತ್ರದಲ್ಲಿ ಪ್ರಿಯಾಮಣಿ ಅವರದ್ದು ಹುಬ್ಬೇರಿಸುವ ಅಭಿನಯ. ಆದರೆ, ರಂಗಾಯಣ ರಘು ವಿಷಯದಲ್ಲಿ ಮಾತ್ರ ಕೇವಲ ಹುಬ್ಬೇರಿಸುವುದೇ ಅಭಿನಯ. ತಮ್ಮಿಂದ ಜನ ಏನು ಅಪೇಕ್ಷಿಸುತ್ತಾರೆ ಎಂದು ತಿಳಿದಿರುವ ಆಶಿಷ್ ವಿದ್ಯಾರ್ಥಿ ಪ್ರೇಕ್ಷಕರನ್ನು ತೃಪ್ತಿಪಡಿಸಿದ್ದಾರೆ. ಸಣ್ಣ ಪುಟ್ಟ ಪಾತ್ರಗಳಲ್ಲಿ ಗುರುದತ್, ಅವಿನಾಶ್ ತಾವೇ ತೃಪ್ತಿಪಟ್ಟುಕೊಂಡಿದ್ದಾರೆ. ರವಿಕಾಳೆ ಪಾತ್ರಕ್ಕೆ ಶೋಭರಾಜ್ ಹೆಚ್ಚು ಸೂಟ್ ಆಗುತ್ತಿದ್ದರೋ ಏನೋ. ಸಣ್ಲಕ್ಷ್ಮಿಯಾಗಿ ಕಾಣಿಸಿಕೊಂಡಿರುವ ಟೆನ್ಲಕ್ಷ್ಮಿ, ಜೂನಿಯರ್ ಲಕ್ಷ್ಮೀ ಪಟಾಕಿ.
ಗುರುಕಿರಣ್ ಸಂಗೀತದಲ್ಲಿ ಎಲ್ಲ ಹಾಡುಗಳೂ ಕೇಳುವಂತಿದ್ದರೂ 'ನೀನೇನೆ', 'ನಾನು ಫುಟ್ಬಾತಲ್ಲಿ ಮೋಟು ಬೀಡಿ ಸೇದ್ತಾ ಇದ್ದೆ', 'ಪುಸ್ಸಿಕ್ಯಾಟ್' ಐಟಂ ಸಾಂಗ್ 'ಲಕ್ಷ್ಮಿ'ಗೆ ಕಳೆತಂದಿವೆ. 'ಲಕ್ಷ್ಮೀ ನೋ ಒನ್ ಕೆನ್ ಟಚ್ ಮೀ' ಹಾಡು ಮಾತ್ರ ಅಂದುಕೊಂಡಷ್ಟು ಪರಿಣಾಮಕಾರಿಯಾಗಿಲ್ಲ, ಛಾಯಾಗ್ರಾಹಕ ಚಂದ್ರಶೇಖರ್ ಕೂಡಾ ಹಾಡು, ಫೈಟು, ಸಂಭಾಷಣೆ ಎಂದು ಭೇದಭಾವ ಮಾಡದೆ ಇಂಡಿಯಾದಿಂದ ಹಾಂಕಾಂಗ್ನವರೆಗೂ ವಿಜೃಂಭಿಸಿದ್ದಾರೆ.
ತನ್ನದೇ ಆದ ವಿಶೇಷತೆಗಳು, ಮತ್ತು ತನ್ನದೇ ಆದ ಕೊರತೆಗಳನ್ನು ಹೊಂದಿರುವ ಲಕ್ಷ್ಮೀ, ಕ್ರಿಕೆಟ್ ಪಂದ್ಯದಲ್ಲಿ ಕೈಯಲ್ಲಿ ವಿಕೆಟ್ ಇದ್ದರೂ ರನ್ರೇಟ್ ಹೆಚ್ಚಿಸಲು ಯತ್ನಿಸದ ಬ್ಯಾಟ್ಸ್ಮನ್ಗಳನ್ನು ನೆನಪಿಸುತ್ತದೆ.
-ಹರಿ